Mangalore: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳ ಮೇಲೆ ಇಸ್ಲಾಮಿಕ್ ಆಕ್ರಮಣ: ಶರಣ್ ಪಂಪ್‌ವೆಲ್
ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದಲೂ ನಿರಂತರವಾಗಿ ಹಿಂದುಗಳ ಮೇಲೆ ಇಸ್ಲಾಮಿಕ್ ಆಕ್ರಮಣಗಳು ನಡೆಯುತ್ತಲೇ ಇದೆ ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಗಳಲ್ಲಿ ಭಯವನ್ನು ಹುಟ್ಟಿಸಿ ರಾಜ್ಯವನ್ನು ಇಸ್ಲಾಮೀಕರಣಗೊಳಿಸಲು ಮೂಲಭೂತವಾದಿ ಗುಂಪುಗಳ ಸಂಚು ರೂಪಿಸುತ್ತಿವೆ. ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ಬೆಂಗಳೂರಿನಲ್ಲಿ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ವಿಚಾರದಲ್ಲಿ ಹಿಂದು ಯುವಕನ ಕೊಲೆ ಯತ್ನ, ರಾಮನವಮಿ ಆಚರಣೆ ವೇಳೆ ಜೈಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಕಾರನ್ನು ಅಡ್ಡಕಟ್ಟಿ ಹಲ್ಲೆ, ಚನ್ನಗಿರಿ ತಾಲೂಕಿನಲ್ಲಿ ರಾಮನವಮಿ ಕಾರ್ಯಕ್ರಮಕ್ಕೆ ಅಡ್ಡಿ, ಬೆಂಗಳೂರಿನ ನಟಿ ಹರ್ಷಿಕಾ ಪೂಣಚ್ಚ ಮತ್ತು ಕುಟುಂಬದವರ ಮೇಲೆ ಹಲ್ಲೆ, ಮೈಸೂರಿನಲ್ಲಿ ಹಿಂದು ಯು ಟ್ಯುಬರ್ ಮೇಲೆ ಹಲ್ಲೆ ನಡೆಸಿ, ಮೂತ್ರ ಕುಡಿಸಿ, ಸಿಗರೇಟ್ ನಿಂದ ಸುಟ್ಟು ದೌರ್ಜನ್ಯ, ಮಂಗಳೂರಿನಲ್ಲಿ ಮುಸ್ಲಿಂ ಗುಂಡಾಗಳಿಂದ ಶಾಸಕರನ್ನು ತಡೆದು ಚುನಾವಣಾ ಪ್ರಚಾರಕ್ಕೆ ಅಡ್ಡಿ, ಮಡಿಕೇರಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಕಾರು ಹರಿಸಿ ಕೊಲೆ, ಚಿತ್ರದುರ್ಗದಲ್ಲಿ ವಿನಾಕಾರಣ ಉಮೇಶ್ ನಾಯಕ್ ಎಂಬವರ ಮೇಲೆ ಹಲ್ಲೆ ಮುಂತಾದ ಘಟನೆಗಳು ಹಿಂದುಗಳನ್ನು ಗುರಿಯಾಗಿ ನಡೆದಿದ್ದು, ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದುಗಳ ಪರಿಸ್ಥಿತಿ ಟಿಪ್ಪು ಆಡಳಿತ ನೆನಪಿಸುವಂತೆ ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಹಿಂದುಗಳ ಮೇಲೆ ಮತಾಂಧ ಜಿಹಾದಿಗಳು ಹಲ್ಲೆ ನಡೆಸುತ್ತಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದು, ನಿರಂತರವಾಗಿ ಯುವತಿಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ಕೃತ್ಯಕ್ಕೂ ಈಗಿನ ಕಾಂಗ್ರೆಸ್ ಸರ್ಕಾರದ ಮೌನ ಬೆಂಬಲವಿದ್ದಂತೆ ಕಾಣುತ್ತಿದೆ. ಯಾವುದೇ ಮತಾಂಧ ಜಿಹಾದಿಗಳನ್ನು ಬಂಧಿಸದೆ ಅವರಿಗೆ ಸರಕಾರ ಸಹಕಾರ ನೀಡುತ್ತಿದೆ. ಈ ಸರಕಾರದ ನೀತಿಯನ್ನು ವಿಶ್ವ ಹಿಂದು ಪರಿಷತ್ ಬಲವಾಗಿ ಖಂಡಿಸುತ್ತಿದ್ದು, ಹಿಂದುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ನೀಡಲಾಗುತ್ತಿದೆ. ಈ ಎಲ್ಲಾ ಘಟನೆಗೆ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿ ಕೊಡುವಂತೆ ವಿಶ್ವ ಹಿಂದು ಪರಿಷತ್ ರಾಜ್ಯಪಾಲರಿಗೆ ಮನವಿ ಮಾಡುತ್ತದೆ ಎಂದರು.
ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಯುವತಿಯರು ಬಲವಂತದ ಪ್ರೀತಿ ಪ್ರೇಮದ ಹೆಸರಿನಲ್ಲಿ ಅತ್ಯಾಚಾರ, ಹಲ್ಲೆ, ಕೊಲೆಗಳು ನಡೆಯುತ್ತಿವೆ. ಅತ್ಯಾಚಾರ, ಆಸಿಡ್ ದಾಳಿ, ಹಲ್ಲೆ ನಡೆಯುತ್ತಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ತಾಯಂದಿರ ಸ್ಥಿತಿ ಈ ರೀತಿ ಆಗುತ್ತಿರುವುದು ಶೋಚನೀಯ. ಸೌಜನ್ಯ ಕೊಲೆ ಪ್ರಕರಣದಿಂದ ಹಿಡಿದು ಉಡುಪಿಯಲ್ಲಿ ಮುಸ್ಲಿಂ ಕುಟುಂಬದ ಹತ್ಯೆ, ಕಡಬದಲ್ಲಿ ಕ್ರೈಸ್ತ ಯುವತಿಯರ ಮೇಲೆ ಆಸಿಡ್ ದಾಳಿ, ಪುತ್ತೂರಿನಲ್ಲಿ ಹಿಂದು ಯುವತಿಯ ಮೇಲೆ ಕೊಲೆ ಯತ್ನ, ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ಜತೆಗೆ ಹಲವಾರು ಮಂದಿ ಹಿಂದು, ಕ್ರೈಸ್ತ ಯುವತಿಯರು ಮತ್ತು ಅವರ ಕುಟುಂಬಗಳು ಲವ್ ಜಿಹಾದಿಗೆ ಬಲಿಯಾಗುತ್ತಿವೆ. ಯುವತಿಯರ ರಕ್ಷಣೆ ಸಮಾಜದ ಕರ್ತವ್ಯವಾಗಿದ್ದು, ಸರಕಾರ ಗಂಭೀರವಾಗಿ ಪರಿಗಣಿಸಿ ಯುವತಿಯರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ಸಿಕ್ಖ್ ಮಹಿಳೆಯರು ತಮ್ಮ ರಕ್ಷಣೆಗೆ ಧರಿಸುವ ಕಿರುಕತ್ತಿ (ಕಿರ್ಪಣ್)ಯಂತೆ ಕರ್ನಾಟಕದಲ್ಲೂ ಮಹಿಳೆಯರು ತಮ್ಮ ಆತ್ಮರಕ್ಷಣೆಗೆ ಕಿರುಕತ್ತಿ ಹೊಂದಲು ಕಾನೂನು ತರಬೇಕು ಮತ್ತು ಯುವತಿಯರ ಆತ್ಮರಕ್ಷಣೆಗೆ ತರಬೇತಿ ಶಿಬಿರ ಆಯೋಜಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ ಎಂದರು.
ಧರ್ಮಸ್ಥಳ ಗ್ರಾಮದ ಸೌಜನ್ಯ ಕೊಲೆ ಪ್ರಕರಣ ಪ್ರಸ್ತುತ ಹೈಕೋರ್ಟ್ನಲ್ಲಿದೆ. ಸೌಜನ್ಯ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಸೌಜನ್ಯ ಪ್ರಕರಣ ಮುಂದಿಟ್ಟು ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನ ನಡೆಸುತ್ತಿರುವುದು ಹೋರಾಟಗಾರರಿಗೆ ಬಿಟ್ಟ ವಿಷಯ ಎಂದು ಹೇಳಿದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಪ್ರಾಂತ ಸಹಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ್ ಪ್ರೀತಮ್ ಕಾಟಿಪಳ್ಳ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ವೇತಾ ಅದ್ಯಪಾಡಿ ಉಪಸ್ಥಿತರಿದ್ದರು.