Mangalore: ಕಾಂಗ್ರೆಸ್ ಬಿಟ್ಟು ಬಿಜೆಪಿ ಕೈ ಹಿಡಿದ ಸಿದ್ದರಾಮಯ್ಯರ ಆಪ್ತೆ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತೆ, ಮನಪಾ ಮಾಜಿ ಮೇಯರ್, ಬಿಲ್ಲವ ಸಮುದಾಯದ ಮುಖಂಡೆ ಕವಿತಾ ಸನಿಲ್ ಮಾತೃ ಪಕ್ಷ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರ ಪರ ಮತಯಾಚಿಸಲು ಬಂಟ್ವಾಳಕ್ಕೆ ರೋಡ್ ಶೋ ನಡೆಸಲು ಶನಿವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಗಮಿಸಿದ ಸಂದರ್ಭದಲ್ಲಿ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿಲ್ಲವ ಸಮುದಾಯದವರೇ ಕಣದಲ್ಲಿ ಇದ್ದ ಸಂದರ್ಭದಲ್ಲಿ ಕವಿತಾ ಸನಿಲ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ನಷ್ಠವಾದಂತಾಗಿದೆ.
‘ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ, ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ರಜೆ ನೀಡದೆ ದಾರ್ಷ್ಟ್ಯ ಪ್ರದರ್ಶನ, ನೇಹಾ ಹತ್ಯೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹಸಚಿವ ಜಿ. ಪರಮೇಶ್ವರ ಅವರ ಹೇಳಿಕೆಗಳು ಬೇಸರ ತರಿಸಿವೆ. ರಾಮ ಭಕ್ತೆಯಾಗಿ, ಹಿಂದೂ ಎಂದು ಧೈರ್ಯದಿಂದ ಹೇಳಿಕೊಳ್ಳಲು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದೇನೆ ಎಂದು ಕವಿತಾ ಸನಿಲ್ ಹೇಳಿದರು.
‘ರಾಜಕೀಯ ಗುರು ಜನಾರ್ದನ ಪೂಜಾರಿ ಅವರೂ ನನಗೆ ಆಶೀರ್ವಾದ ಮಾಡಿದ್ದಾರೆ. ಪ್ರಧಾನಿ ಅವರ ಆಡಳಿತ ಮೆಚ್ಚಿ ಬಿಜೆಪಿಗೆ ಸೇರುತ್ತಿದ್ದೇನೆ. ಯಾವುದೇ ಫಲಾಪೇಕ್ಷೆ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿಲ್ಲ’ ಎಂದು ತಿಳಿಸಿದರು.