Mangalore: ಮೋದಿಯವರ ಮೇಲೆ ಪುಷ್ಪವೃಷ್ಟಿ..!
Monday, April 15, 2024
ಮಂಗಳೂರು: ರೋಡ್‌ಶೋ ಹಾದಿಯಲ್ಲಿ ಬಹುಮಹಡಿ ಕಟ್ಟಡಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಮೇಲೆ ಪುಷ್ಪವೃಷ್ಟಿ ನಿರಂತರವಾಗಿ ನಡೆಯುತ್ತಿತ್ತು. ರೋಡ್‌ಶೋ ಹಾದಿಯನ್ನು ಕೂಡ ಪುಷ್ಪ, ರಂಗವಲ್ಲಿಗಳಿಂದ ಅಲಂಕರಿಸಿ ಉತ್ಸವದ ಕಳೆ ನೀಡಲಾಗಿತ್ತು. ಸುಮಾರು ಐದು ಕೇಜಿ ಹೂವಿನ ಎಸಳನ್ನು ಪುಷ್ಪವೃಷ್ಟಿಗೆ ಬಳಸಿದ್ದು, ರೋಡ್‌ಶೋ ಪಿವಿಎಸ್ ಮೂಲಕ ನವಭಾರತ ವೃತ್ತ ತಲಪುವಾಗ ಪ್ರಧಾನಿ, ಭದ್ರತಾ ಸಿಬ್ಬಂದಿ ಸಹಿತ ವಿಶೇಷ ವಾಹನವೂ ಪುಷ್ಪವೃಷ್ಟಿಯಿಂದ ತೊಯ್ದು ಹೋಗಿತ್ತು. ಪ್ರಧಾನಿ ನರೇಂದ್ರ ಮೋದಿಯ ಅಬ್ಬರದ ರೋಡ್‌ಶೋ ಮಂಗಳೂರಿನಲ್ಲಿ ದಾಖಲೆ ನಿರ್ಮಿಸಿತು.
5 ಸಾವಿರ ಕೆ.ಜಿ. ಪುಷ್ಪ ವೃಷ್ಠಿ....:
ಮೋದಿ ಅವರು ರ್ಯಾಲಿ ಮೂಲಕ ಸಾಗುವ ಸಂದರ್ಭ 5 ಸಾವಿರ ಕೆ.ಜಿ. ಪುಷ್ಪ ವೃಷ್ಠಿ ಮಾಡಲು ಉದ್ದೇಶಿಸಲಾಗಿದೆ. ಎಸ್ಪಿಜಿ ಪರಿಶೀಲನೆ ಬಳಿಕ ಈ ಪುಷ್ಪ ವೃಷ್ಠಿ ಮಾಡಲು ಅನುಮತಿ ಸಿಗಲಿದೆ. ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ರ್ಯಾಲಿ ವೀಕ್ಷಣೆಗೆ ಬರುವವರು ಸಂಜೆ 5 ಗಂಟೆ ಒಳಗೆ ಬಂದರೆ ತಪಾಸಣೆ ಪ್ರಕ್ರಿಯೆ ನಡೆಸಲು ಸಹಕಾರಿಯಾಗಲಿದೆ. ರಸ್ತೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆಯೂ ಆಗುವುದಿಲ್ಲ. ಕಪ್ಪು ಅಂಗಿ ಧರಿಸಿದವರಿಗೆ ಒಳಗೆ ಪ್ರವೇಶ ಇರುವುದಿಲ್ಲ. ಬ್ಯಾಗ್ ಮತ್ತಿತರ ವಸ್ತುಗಳನ್ನು ರ್ಯಾಲಿ ನಡೆಯುವ ಸ್ಥಳಕ್ಕೆ ತರಲು ಅವಕಾಶ ಇರುವುದಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇರಲಿದೆ.
ಬಂದ್‌ನ ವಾತಾವರಣ, ಬಿಗು ಭದ್ರತೆ..:
ರೋಡ್ ಶೋ ಹಿನ್ನೆಲೆಯಲ್ಲಿ ಮಂಗಳೂರು ಬಹುತೇಕ ಬಂದ್‌ನಂತಿತ್ತು. ರೋಡ್ ಶೋ ಭದ್ರತಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ರೋಡ್ ಶೋ ಮೇಲೆ ಹದ್ದಿನ ಕಣ್ಣಿಡಲಾಗಿತ್ತು.
ಬೆಂಕಿ ಅನಾಹುತ..
ರಾತ್ರಿ ೮.೩೦ರ ಸಮಯಕ್ಕೆ ಲಾಲ್‌ಬಾಗ್ ಬಳಿಯಲ್ಲಿರುವ ಮೆಡಿಕಲ್ ಗೋಡಾನ್‌ಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮೋದಿಯವರು ಅಲ್ಲಿಯೇ ಹತ್ತಿರದಲ್ಲಿ ರೋಡ್ ಶೋ ನಡೆಯುತ್ತಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಹಾಗೂ ಉತ್ತರ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ಮೊದಲಾದವರಿದ್ದರು.

