Mangalore: ಚುನಾವಣೆಗೆ ರಂಗೇರಿದ ಮೋದಿ ರೋಡ್ ಶೋ......
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಮಂಗಳೂರಿನಲ್ಲಿ ಭಾನುವಾರ ಸಂಜೆ ಪ್ರಧಾನಿಯವರು ರೋಡ್ ಶೋ ನಡೆಸುವ ಮೂಲಕ ಚುನಾವಣಾ ರಂಗನ್ನು ಹೆಚ್ಚಿಸಿದ್ದಾರೆ.
ವಿಶೇಷ ವಿಮಾನದ ಮೂಲಕ ಸಂಜೆ ಸುಮಾರು 7.30ಕ್ಕೆ ಮಂಗಳೂರಿಗೆ ಆಗಮಿಸಿದ ಪ್ರಧಾನಿಯವರು ಲೇಡಿಹಿಲ್‌ನ ನಾರಾಯಣಗುರು ವೃತ್ತದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. ಈ ಸಂದರ್ಭ ಕರಾವಳಿ ಭೇಟಿಯ ನೆನಪಿಗೆ ನರೇಂದ್ರ ಮೋದಿಗೆ ಪೇಟ, ರುದ್ರಾಕ್ಷಿ ಹಾರ ಹಾಕಿ, ಕೇಸರಿ ಬಣ್ಣದ ವಿಶಿಷ್ಟ ಜರಿಶಾಲು ಹೊದಿಸಿ, ಶ್ರೀಕೃಷ್ಣ ದೇವರ ಅಟ್ಟೆಯ ಪ್ರಭಾವಳಿಯ ವಿಶೇಷ ಉಡುಗೊರೆ ನೀಡಲಾಯಿತು.
ತಂತ್ರಕ್ಕೆ ಪ್ರತೀ ತಂತ್ರ..:
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೆಚ್ಚಿರು ಬಿಲ್ಲವ ಮತಗಳು ಬಿಜೆಪಿ ಕಡೆ ಹೆಚ್ಚು ವಾಲಿದ್ದು, ಬಿಲ್ಲವ ಮತಗಳನ್ನು ತನ್ನತ್ತ ಸೆಳೆಯಲು ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ತಂತ್ರಗಾರಿಕೆಗೆ ನರೇಂದ್ರ ಮೋದಿ ಅವರನ್ನು ಕರೆಸಿ ಅವರಿಂದಲೇ ನಾರಾಯಣಗುರು ಪ್ರತಿಮೆಗೆ ಪುಷ್ಪಾರ್ಚನೆ, ನಮನ ಕಾರ್ಯಕ್ರಮ ಏರ್ಪಡಿಸುವ ಬಿಲ್ಲವ ಸಮುದಾಯದ ಜತೆ ಬಿಜೆಪಿ ಇದೆ ಎಂಬ ಸಂದೇಶ ರವಾನಿಸಿದ್ದು, ಕಾಂಗ್ರೆಸ್‌ಗೆ ಟಾಂಗ್ ಕೊಡುವ ಪ್ರಯತ್ನ ನಡೆದಿದೆ.
ರೋಡ್‌ಶೋವಿನ ವಿಶೇಷ ವಾಹನದಲ್ಲಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕೋಟ ಶ್ರೀನಿವಾಸ ಪೂಜಾರಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಇದ್ದರು.





