Mangalore: ಸಿದ್ದು ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಡಾ. ವೈ ಭರತ್ ಶೆಟ್ಟಿ
ಮಂಗಳೂರು: ದಿನ ಬೆಳಗಾದರೆ ಗ್ಯಾರಂಟಿ ಗ್ಯಾರಂಟಿ ಎನ್ನುವ ಸಿದ್ದರಾಮಯ್ಯ ಸರಕಾರ, ನಿಜವಾಗಿಯೂ ಕೊಟ್ಟಿರುವುದು ಬಹುಸಂಖ್ಯಾತ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಯ ಗ್ಯಾರಂಟಿ, ಲವ್ ಜಿಹಾದ್ ಗ್ಯಾರಂಟಿ, ಮಹಿಳೆಯರ ಮಾನ-ಪ್ರಾಣ ಹರಣದ ಗ್ಯಾರಂಟಿ ಮತ್ತು ಭ್ರಷ್ಟಾಚಾರ, ಲೂಟಿಯ ಗ್ಯಾರಂಟಿ ಮಾತ್ರ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿರಹಿತ, ದೂರದೃಷ್ಟಿಯಿಲ್ಲದ, ರಾಜ್ಯದ ಜನತೆಗೆ ಯಾವುದೇ ರೀತಿಯ ನೆಮ್ಮದಿ ನೀಡದ ಸರಕಾರವಿದು ಎಂದು ತರಾಟೆಗೆ ತೆಗೆದುಕೊಂಡರು.
ಗ್ಯಾರಂಟಿ ಗ್ಯಾರಂಟಿ ಅನ್ನುವ ಮಾತನ್ನು ಹೇಳುತ್ತಿದ್ದಾರಲ್ಲ, ಯಾವುದರ ಗ್ಯಾರಂಟಿ ಬಗ್ಗೆ ಮಾತಾಡ್ತಾರೆ ಇವರು? ಇಡೀ ಕರ್ನಾಟಕದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಗ್ಯಾರಂಟಿ ಇಲ್ಲ, ಮಹಿಳೆಯರ ಮಾನ ಪ್ರಾಣ ರಕ್ಷಣೆಯ ಗ್ಯಾರಂಟಿ ಇಲ್ಲ. ಕುಡಿಯುವ ನೀರಿಗೂ ಗ್ಯಾರಂಟಿ ಇಲ್ಲ, ರೈತರ ಬದುಕಿಗೂ ಗ್ಯಾರಂಟಿ ಇಲ್ಲ; ಯಾವ ಗ್ಯಾರಂಟಿಗಳನ್ನು ಕೊಟ್ಟು ಸಿದ್ದರಾಮಯ್ಯ ಸರಕಾರ ಯಾವುದನ್ನೂ ಸರಿಯಾಗಿ ಜಾರಿ ಮಾಡಿಲ್ಲ. ಪರಿಶೀಲನೆ ಮಾಡಿದರೆ- ಹಿಂದೂಗಳ ಭಾವನೆಗಳಿಗೆ ಯಾವುದೇ ರೀತಿಯ ಗ್ಯಾರಂಟಿ ಇಲ್ಲ, ಸ್ತ್ರೀಯರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ತುಷ್ಟೀಕರಣದ ನೀತಿಯನ್ನು ಮಾತ್ರ ಮುಂದಿಟ್ಟುಕೊಂಡು ಸಿದ್ದರಾಮಯ್ಯನವರು ಸರಕಾರ ಮುನ್ನಡೆಸುತ್ತಿದ್ದಾರೆ. ದಿನ ಬೆಳಗಾದರೆ ಎಲ್ಲೋ ಒಂದು ಕಡೆ ಜಿಹಾದಿಗಳ ಅಟ್ಟಹಾಸ ಇಡೀ ಕರ್ನಾಟಕದಲ್ಲಿ ಕೇಳಿಸುತ್ತಿದೆ ಎಂದು ಶಾಸಕರು ಮಾತಿನ ಏಟು ನೀಡಿದರು.
ಜಿಹಾದಿಗಳ ಅಟ್ಟಹಾಸಕ್ಕೆ ಯಾವುದೇ ರೀತಿಯಾದ ನ್ಯಾಯಯುತ ಸ್ಪಂದನೆ ಸರಕಾರದಿಂದ ಆಗುತ್ತಿಲ್ಲ. ನೇಹಾ ಹಿರೇಮಠರ ಹತ್ಯೆ. ಕಾಂಗ್ರೆಸ್ ಕಾರ್ಪೊರೇಟರ್ ಒಬ್ಬರ ಮಗಳು ಕಾಲೇಜಿನಲ್ಲಿ ಎಲ್ಲರ ಸಮ್ಮುಖದಲ್ಲಿ ಈ ರೀತಿ ಹತ್ಯೆಯಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆಯನ್ನು ಗಮನಿಸಿದರೆ- ಹಿಂದೂಗಳ ಜೀವದ ಮೇಲೆ, ಹಿಂದೂ ಮಹಿಳೆಯರ ಮಾನ-ಪ್ರಾಣದ ಮೇಲೆ ಇವರಿಗೆ ಯಾವ ರೀತಿಯ ಗೌರವವೂ ಇಲ್ಲದ ಹಾಗೆ ಕಾಣುತ್ತದೆ. ಬರೀ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿಯೇ ಸರಕಾರ ನಡೆಸುತ್ತಿರುವುದು ಕಾಣುತ್ತದೆ.
ಸ್ವಂತ ಪಕ್ಷದ ಕಾರ್ಪೊರೇಟರ್ನ ಮಗಳ ಹತ್ಯೆ ಆದಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನೂ ಸಿದ್ದರಾಮಯ್ಯ ಆಗಲಿ, ಪರಮೇಶ್ವರ್ ಆಗಲಿ ಮಾಡಿಲ್ಲ. ಅವರದೇ ಕಾರ್ಯಕರ್ತ, ನಾಯಕನ ಮಗಳ ಹತ್ಯೆ ಆದಾಗಲೂ ಹೀಗಾಗುವುದು, ಹೋದರೆ ಅಲ್ಪಸಖ್ಯಾತರಿಗೆ ಎಲ್ಲಿ ಬೇಸರವಾಗುತ್ತದೋ ಎಂಬ ನಡವಳಿಕೆ ಖಂಡನೀಯ ಎಂದರು.
ಬಿಜೆಪಿ ಜಿಲ್ಲಾ ಪ್ರಧಾ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಖಜಾಂಚಿ ಸಂಜಯ್ ಪ್ರಭು ಹಾಗೂ ಮಾಧ್ಯಮ ಸಂಚಾಲಕರಾದ ಕದ್ರಿ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.