Ullal: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರ ರೋಡ್ ಶೋ ಮೂಲಕ ಪ್ರಚಾರ ಜಾಥಾ
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನ ಸಹಕಾರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ರೋಡ್ ಶೋ ಮೂಲಕ ಮತಯಾಚನೆ ಕಾರ್ಯಕ್ರಮ ಭಾನುವಾರ ನಡೆಯಿತು.
ಮಲಯಾಳಕೋಡಿ ಶ್ರೀ ಮಲಯಾಳ ಚಾಮುಂಡಿ ಬಂಟ ಮುಂಡತ್ತಾಯ ದೈವಸ್ಥಾನ ಹಾಗೂ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ, ರೋಡ್ ಶೋಗೆ ಚಾಲನೆ ನೀಡಲಾಯಿತು. ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ಬಳಿ ಕ್ರೇನ್ ಮೂಲಕ ಬೃಹತ್ ಹೂಮಾಲೆಯನ್ನು ಹಾಕಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಕಾರ್ಯಕರ್ತರು ಸ್ವಾಗತಿಸಿ ಬರ ಮಾಡಿಕೊಂಡರು.
ಕೊಲ್ಯ ನಾರಾಯಣ ಗುರು ಮಂದಿರದಿಂದ ಆರಂಭಗೊಂಡ ರೋಡ್ ಶೋ ಕಾರ್ಯಕ್ರಮವು ಉಳ್ಳಾಲ, ಮಾಸ್ತಿಕಟ್ಟೆ, ಕೋಡಿ, ಕೋಟೆಪುರ ರಸ್ತೆಯಾಗಿ ಸಾಗಿತ್ತು. ಈ ಸಂದರ್ಭದಲ್ಲಿ ಅಭ್ಯರ್ಥಿ ಪದ್ಮರಾಜ್ ಅವರು ಮತದಾರರ ಗಮನ ಸೆಳೆದು ಮತಯಾಚನೆ ನಡೆಸಿದರು.ಕಾರ್ಯಕರ್ತರು ವಿವಿಧ ಘೋಷಣೆಗಳ ಜೊತೆ ಸಿದ್ದರಾಮಯ್ಯ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ಮತದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ನಿಖಿತ್ ರಾಜ್ ಮೌರ್ಯ ಮಾತನಾಡಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಜಾತಿ, ಧರ್ಮಗಳ ನಡುವೆ ಒಡಕು ಉಂಟು ಮಾಡುವ ಕೆಲಸ ಮಾಡಲಿಲ್ಲ, ಎಲ್ಲರೂ ಒಗ್ಗಟ್ಟಾಗಿ ಸೌಹಾರ್ದ ಉಳಿಸುವ ಕೆಲಸ ಆಗಬೇಕು ಎಂಬುದು ಅವರ ಗುರಿ. ನಾನು ಅಷ್ಟು ದೂರದಿಂದ ಉಳ್ಳಾಲಕ್ಕೆ ಬಂದಿರುವುದು ಪದ್ಮರಾಜ್ ರಾಮಯ್ಯ ಗೆಲ್ಲಬೇಕು ಎಂಬ ಉದ್ದೇಶದಿಂದ ಆಗಿದೆ.ನಮಗೆ ಉತ್ತಮ ಸಂಸದ ಕೂಡಬೇಕು. ಈ ಬಾರಿ ಪದ್ಮರಾಜ್ ರಾಮಯ್ಯ ಗೆಲುವು ಸಾಧಿಸಲು ಮತದಾರರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಎತ್ತ ಕಡೆ ಸಾಗುತ್ತಿದೆ ಎಂದು ನೋಡಿದರೆ ಗೊತ್ತಾಗುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವ ದ ಹಬ್ಬ ಆಗಿದೆ. ದಕ್ಷಿಣ ಕನ್ನಡ ಅಭಿವೃದ್ಧಿ ಈಗ ಕುಂಠಿತ ಆಗುತ್ತಿದೆ. 40 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸಂಸದರು ಜಿಲ್ಲೆಯ ಅಭಿವೃದ್ಧಿಗೆ ಪ್ರತ್ಯೇಕ ಒತ್ತು ನೀಡುತ್ತಿದ್ದರು. 40 ವರ್ಷಗಳ ಸಾಧನೆ ಏನು ಎಂಬ ಪ್ರಶ್ನೆ ಬಿಜೆಪಿಗರು ಕೇಳುತ್ತಿದ್ದಾರೆ. ಕಳೆದ 40 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಮಂಗಳೂರಿಗೆ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಕೆಆರ್‌ಸಿ, ರಾಷ್ಟ್ರೀಯ ಹೆದ್ದಾರಿ, ಎಂಆರ್‌ಪಿಎಲ್, ಒಎನ್‌ಜಿಸಿ ಬಂದಿದೆ. ಬಿಜೆಪಿಗರಿಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿವಾದಾಗ ಅವರು ಭಾರತದ ಭವ್ಯ ಸಂಸ್ಕೃತಿಗೆ ಹಾನಿ ಮಾಡಲು ಆರಂಭಿಸಿದರು.
ಕೋಮು ವಿಷಬೀಜ ಬಿತ್ತಿ ಅಪಪ್ರಚಾರ ಮಾಡುವ ಮೂಲಕ ಗೆಲುವು ಸಾಧಿಸಿದ ಬಿಜೆಪಿಗೆ ಈಗ 33 ವರ್ಷ ಆಗಿದೆ. ಈ 33 ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದ ಅವರು, ಜನರಿಗೆ ಶಿಕ್ಷಣ, ಉದ್ಯೋಗ ಇಲ್ಲ, ಉನ್ನತ ಶಿಕ್ಷಣ ಪಡೆದವರು ಸರಿಯಾದ ಉದ್ಯೋಗ ಸಿಗದೆ ಅವರು ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗುವ ಪರಿಸ್ಥಿತಿ ಬಂತು. ಅವರ ಪೋಷಕರು ಕಣ್ಣೀರಿನಿಂದ ಬದುಕುವ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಚಿತ್ರ ನಟಿ ಕಾವ್ಯಶ್ರೀ ಮಾತನಾಡಿ, ಬ್ರಿಟಿಷರು ಭಾರತಕ್ಕೆ ಬಂದು ಜಾತಿ ಧರ್ಮದ ಹೆಸರಿನಲ್ಲಿ ಭಾರತೀಯರನ್ನು ವಿಂಗಡಿಸಿದರು. ಈಗ ಬಿಜೆಪಿ ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ವಿಂಗಡಿಸುತ್ತಿದೆ. ಇದರ ವಿರುದ್ಧ ಸಮಗ್ರ ಹೋರಾಟ ಅಗತ್ಯ. ಈ ಹಿನ್ನೆಲೆಯಲ್ಲಿ ನಮಗೆ ಈಬಾರಿ ಪದ್ಮರಾಜ್ ರಾಮಯ್ಯ ಗೆಲ್ಲಲೇಬೇಕಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳ್ಯಾರ್, ಉಪಾಧ್ಯಕ್ಷ ದಿನೇಶ್ ರೈ, ಪ್ರಕಾಶ್ ಕುಂಪಲ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ವಿಶ್ವಾಸ ಕುಮಾರ್ ದಾಸ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಮಾಜಿ ಅಧ್ಯಕ್ಷ ಕೃಪಾ ಆಳ್ವ, ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕರ್ ಫರೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾದ್ಯಕ್ಷೆ ಶಾಲೆಟ್ ಪಿಂಟೋ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ನಾಸೀರ್ ಅಹ್ಮದ್ ಸಾಮಣಿಗೆ, ಇಕ್ಬಾಲ್ ಸಾಮಣಿಗೆ, ಸುರೇಶ್ ಭಟ್ನಗರ, ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ, ಮೌಶೀರ್ ಸಾಮಣಿಗೆ, ಸ್ವಪ್ನ ಹರೀಶ್, ದಿನೇಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.


