Moodubidire: ಮೂಡುಬಿದಿರೆಯಲ್ಲಿ ಶಾಂತಿಯುತ ಮತದಾನ-ಹಕ್ಕು ಚಲಾಯಿಸಿದ ಮದುಮಗ, ಮದುಮಗಳು ಹಾಗೂ ಶತಾಯುಷಿ
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ನಗರ ಹಾಗೂ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ವರೆಗೆ ಬಿರುಸಿನಿಂದ ಮತ್ತು ಶಾಂತಿಯುತವಾಗಿ ಮತದಾನವಾಗಿದೆ.
ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಮುಂಜಾನೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಬೆಳಗ್ಗೆ 9.30ರವರೆಗೆ ಬಿರುಸಿನ ಮತದಾನ ನಡೆದಿದೆ. ಆ ಬಳಿಕ ಮಧ್ಯಾಹ್ನದವರೆಗೆ ಸಾಧಾರಣವಾಗಿ ಮತದಾನ ನಡೆಯಿತು. ಮೂರು ಗಂಟೆಯ ನಂತರ ಪುನಃ ಬಿರುಸಿನ ಮತದಾನ ನಡೆದಿದ್ದು, ಕೆಲವು ಬೂತಿನಲ್ಲಿ 1 ಗಂಟೆಗೂ ಅಧಿಕ ಸಮಯ ಸರತಿ ಸಾಲು ಕಂಡುಬಂತು.
ಶತಾಯುಷಿ, ನಿವೃತ್ತ ಶಿಕ್ಷಕ ಸೀತಾರಾಮ ಶೆಟ್ಟಿ ಮಂಗಳೂರಿನಿಂದ ಕಾರಿನಲ್ಲಿ ಬಂದು ಮಿಜಾರು ಬಂಗಬೆಟ್ಟುವಿನಲ್ಲಿ ಮತ ಚಲಾಯಿಸಿದ್ದಾರೆ.
ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ಯಾಮ್ ಪ್ರಸಾದ್ ಅವರ ಪುತ್ರಿ ನವ ವಧು ಅಮೃತಾ ಬನ್ನಡ್ಕ ಪಾಂಚಜನ್ಯ ಸಭಾಭವನದಲ್ಲಿ ಮದುವೆ ಶಾಸ್ತ್ರ ಮುಗಿಸಿ, ನವವಧುವಿನ ಧಿರಿಸಿನಲ್ಲೇ ಪಡುಮಾರ್ನಾಡು ಪಂಚಾಯತ್ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಧವಲಾ ಕಾಲೇಜಿನ ಉಪನ್ಯಾಸಕ ಸೂರಜ್ ಮಹಾವೀರ ಭವನದಲ್ಲಿ ಮದುವೆ ಶಾಸ್ತ್ರ ಮುಗಿಸಿ, ವಾಲ್ಪಾಡಿ ಪೆರಿಬೆಟ್ಟು ಶಾಲೆಯಲ್ಲಿ ಮತದಾನ ಮಾಡಿದರು. ಸೂರಜ್ ಅವರನ್ನು ಮದುವೆಯಾಗಿರುವ ಮಾಂಟ್ರಾಡಿಯ ಶ್ರೀರಕ್ಷಾ ಅವರು ಮದುವೆ ಕಾರ್ಯಕ್ರಮ ಮುಗಿಸಿ ಮಾಂಟ್ರಾಡಿಗೆ ತೆರಳಿ ಮತದಾನ ಮಾಡಿದ್ದಾರೆ.
ಕಲ್ಲಬೆಟ್ಟು, ಶಿರ್ತಾಡಿ, ಧರೆಗುಡ್ಡೆ, ಸಂಪಿಗೆಯಲ್ಲಿ ಮಂದಗತಿಯಲ್ಲಿ ಹಾಗೂ ಕಲ್ಲಮುಂಡ್ಕೂರು, ನಿಡ್ಡೋಡಿ ಹಂಡೇಲಿನಲ್ಲಿ ಪ್ರಾರಂಭದಿಂದಲೇ ಬಿರುಸಿನ ಮತದಾನ ನಡೆಯಿತು. ಪುತ್ತಿಗೆ 83 ಮತಗಟ್ಟೆಯಲ್ಲಿ ಪ್ರತೀಕ್ಷಾ ಎನ್ನುವವರ ಮತವನ್ನು ಬೇರೆಯವರು ಚಲಾಯಿಸಿದ್ದು, ಅಲ್ಲಿದ್ದ ಅಧಿಕಾರಿಗಳು ಚಾಲೆಂಜಿಂಗ್ ಮತಕ್ಕೂ ಅವಕಾಶ ನೀಡಿಲ್ಲ. ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯಲ್ಲಿ ಸೆಲ್ಫಿ ಪಾಯಿಂಟ್ ಹಾಕಿದರೂ ಗಂಟೆಗಟ್ಟಲೆ ಯಾರೂ ಅದರತ್ತ ಹೋಗಿಲ್ಲ. ಪುರಸಭೆ ವ್ಯಾಪ್ತಿಯ ಜ್ಯೋತಿ ನಗರ ಶಾಲೆ ಮತಗಟ್ಟೆಯಲ್ಲಿ ಮತಪಟ್ಟಿಯಲ್ಲಿ ಹೆಸರು, ಕ್ರಮ ಸಂಖ್ಯೆ ಅಸ್ಪಷ್ಟ, ಮತದಾನ ವಿಳಂಬ, ಗೊಂದಲ ಉಂಟಾಯಿತು. ಪುರಸಭೆ ಸದಸ್ಯ ಕೊರಗಪ್ಪ ಮತ್ತು ಕರ್ತವ್ಯನಿರತ ಪೊಲೀಸ್ ಮಧ್ಯೆ ಮಾತಿನ ಚಕಮಕಿ ನಡೆಯಿತು.