Moodubidire: ಮೂಡುಬಿದಿರೆ ಮತದಾರರಿಂದ ಬೆಳಿಗ್ಗೆಯೇ ಉತ್ತಮ ಪ್ರತಿಕ್ರಿಯೆ
ಮೂಡುಬಿದಿರೆ: ಲೋಕಸಭಾ ಚುನಾವಣೆಗೆ ಮೂಡುಬಿದಿರೆಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಬೆಳಿಗ್ಗೆ ಬೇಗನೆ ಮತಗಟ್ಟೆಗಳಿಗೆ ತೆರಳುವ ಮೂಲಕ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ.
ಮೂಡುಬಿದಿರೆ ಡಿ.ಜೆ. ಶಾಲೆಯ ಮತಗಟ್ಟೆಗೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು 6.55 ರ ವೇಳೆಗೆ ಆಗಮಿಸಿ ಸರತಿ ಸಾಲಿನಲ್ಲಿ ಮೊದಲಿಗರಾಗಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
ನಂತರ ಮಾತನಾಡಿದ ಅವರು ಮತದಾನ ಮಾಡುವುದು ನಮ್ಮ ಕರ್ತವ್ಯ. ಅಂತರಾಷ್ಟ್ರೀಯ ಮಟ್ಟದಿಂದ ಈ ದೇಶವನ್ನು ಉಳಿಸತಕ್ಕಂತಹ ಚಾಕಚಕ್ಯತೆಯೊಂದಿಗೆ ಎಲ್ಲರೊಂದಿಗೆ ವಿಕಾಸ ಮಾಡತಕ್ಕಂತಹ ಒಬ್ಬ ಯೋಗ್ಯ ನಾಯಕನನ್ನು ಆಯ್ಕೆ ಮಾಡುವುದು ಉತ್ತಮ ಆದ್ದರಿಂದ ಯಾರಿಗೂ ಹೆದರದೆ ನಿಮ್ಮ ಹಕ್ಕನ್ನು ಚಲಾಯಿಸಿ ಎಂದರು.
ಇದೇ ಮತಗಟ್ಟೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಅವರೂ ತನ್ನ ಪತ್ನಿ ಮಂಜುಳಾ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಜ್ಜನ ರಾಜಕರಣಿ ಪದ್ಮರಾಜ್ ಅವರು ಈ ಬಾರಿ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದು ಎಲ್ಲರಿಗೂ ಬಹಳ ಪ್ರೀತಿ, ವಾತ್ಸಲ್ಯದಿಂದ ಸುಲಭವಾಗಿ ಸಿಗುವವರು. ಸಿದ್ಧರಾಮಯ್ಯ ಅವರ ಮಹತ್ವದ ಯೋಜನೆಗಳು, ಜನಸಾಮಾನ್ಯರಿಗೆ ಸ್ಪಂದಿಸುವಂತಹ ಭಾರತ ದೇಶದ ಉತ್ತಮ ರಾಜಕರಣಿಯಾಗಿದ್ದು ಇದರಿಂದ ಜನಸಾಮಾನ್ಯರು ಕಾಂಗ್ರೆಸ್ ಗೆ ಮತ ನೀಡುತ್ತಾರೆಂದರು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಡುಬಿದಿರೆ ಬಿ.ಇ.ಒ ಕಚೇರಿಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ನಂತರ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಗೆಲುವು ಖಚಿತ. ಈ ಬಾರಿ ಶೇ 25ರಷ್ಟು ಮತದಾರರು ಹೆಚ್ಚು ಇದ್ದಾರೆ ಕಳೆದ ಬಾರಿ 2.70 ಲಕ್ಷ ಹೆಚ್ಚು ಮತಗಳು ಬಿದ್ದಿದ್ದವು ಈ ಬಾರಿ 3-4 ಲಕ್ಷದಷ್ಟು ಮತಗಳು ಹೆಚ್ಚು ಬೀಳುವ ನಿರೀಕ್ಷೆಯಿದೆ ಎಂದರು.
ಮತಗಟ್ಟೆಗಳಲ್ಲಿ ಹಿರಿಯರು, ಅನಾರೋಗ್ಯ ಹೊಂದಿದವರನ್ನು ಅವರ ಮನೆಯವರು ವಾಹನಗಳಲ್ಲಿ ಕರೆದುಕೊಂಡು ಬಂದು ಮತವನ್ನು ಚಲಾಯಿಸಲು ಸಹಕರಿಸಿರುವುದು ಕಂಡು ಬಂತು.


