Mulki: ಜಾತಿ ಧರ್ಮದ ಮೇಲೆ ವಿಷ ಬೀಜ ಬಿತ್ತಿ ಕಾನೂನು ಬಾಹಿರ ಕೃತ್ಯಗಳಿಗೆ ಪ್ರಚೋದನೆ ನೀಡಿದ್ದೇ ಬಿಜೆಪಿಯ ಸಾಧನೆ
ಮುಲ್ಕಿ: ಕಳೆದ 40 ವರ್ಷಗಳ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಪಪ್ರಚಾರದ ಮೂಲಕ ಅಧಿಕಾರ ಗಿಟ್ಟಿಸಿಕೊಂಡು ಕಳೆದ 33 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ, ಚುನಾವಣೆ ಬರುವಾಗ ಜಾತಿ ಧರ್ಮದ ಮೇಲೆ ವಿಷ ಬೀಜ ಬಿತ್ತಿ ಕಾನೂನು ಬಾಹಿರ ಕೃತ್ಯಗಳಿಗೆ ಪ್ರಚೋದನೆ ನೀಡಿದ್ದೇ ಬಿಜೆಪಿಯ ಸಾಧನೆ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಆರೋಪಿಸಿದರು.
ಅವರು ಎ.12 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಹಳೆಯಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ಮೂಲ್ಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ಮೂಲ್ಕಿ ಬಂಟರ ಭವನದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಬಿಜೆಪಿಗರು ಅಪಪ್ರಚಾರ ಕುತಂತ್ರದಲ್ಲಿ ನಿಸ್ಸೀಮರಾಗಿದ್ದು ಜನ ಯಾವುದಕ್ಕೂ ಬಲಿ ಬೀಳದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಭಿವೃದ್ಧಿಗೆ ಮತ ನೀಡಿ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜಶೇಖರ್ ಕೋಟ್ಯಾನ್ ಥುನ್ ರೈ, ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವೀಕ್ಷಕ ವಸಂತ್ ಬೆರ್ನಾಡ್, ಮೂಡುಬಿದಿರೆ ಹಾಗೂ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವೀಕ್ಷಕರಾದ ಗುರುರಾಜ್ ಎಸ್. ಪೂಜಾರಿ, ಸುರೇಶ್ ಕೋಟ್ಯಾನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾಂಗ್ರೆಸ್ ನಾಯಕರಾದ ಜನಾರ್ದನ್ ಬಂಗೇರ, ಪ್ರಮೋದ್ ಕುಮಾರ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ದ.ಕ. ಲೋಕಸಭಾ ಅಭ್ಯರ್ಥಿ ಪದ್ಮರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮೂಲ್ಕಿ ನ.ಪಂ. ಸದಸ್ಯರಾದ ಪುತ್ತುಭಾವ ಯೋಗೀಶ ಕೋಟ್ಯಾನ್, ಮಂಜುನಾಥ ಕಂಬಾರ, ಬಾಲಚಂದ್ರ ಕಾಮತ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಕಾಂಗ್ರೆಸ್ ನಾಯಕರಾದ ಪ್ರವೀಣ್ ಪಕ್ಷಿಕೆರೆ, ಅಶ್ವಿನ್ ಆಳ್ವ ಪಕ್ಷಿಕೆರೆ, ಶರತ್ ಕಾರ್ನಾಡ್, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.