Putturu: ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡಿದ ಪ್ರಧಾನಿ ಮೋದಿ: ಮಾಳವಿಕಾ ಅವಿನಾಶ್
ಪುತ್ತೂರು: ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡಿದ ಪ್ರಧಾನಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ನಾರೀಶಕ್ತಿಯ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಹೇಳಿದರು.
ಪುತ್ತೂರಿನ ಜೈನ ಭವನದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಾರಿಶಕ್ತಿ ಸಮಾವೇಶವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮೋದಿ ಜಾರಿಗೆ ತಂದು ಯೋಜನೆಗಳಿಗೆ ಕಾಂಗ್ರೇಸ್ ತನ್ನ ಹೆಸರು ಹಾಕಿಕೊಂಡು ಜನತೆಗೆ ಮೋಸ ಮಾಡುತ್ತಿದ್ದಾರೆ. ಗರೀಬಿ ಹಟಾವೋ ಎಂದು ಇಂದಿರಾ ಗಾಂಧಿ 70ರ ದಶಕದಲ್ಲಿ ಹೇಳಿದ್ದರೂ ಅದನ್ನು ಮಾಡಲು ಮೋದಿ ಬರಬೇಕಾಯಿತು. ಭ್ರಷ್ಟಾಚಾರದ ಕೂಪವಾಗಿದ್ದ ಭಾರತ ಸಬಲೀಕರಣ ಮಾಡಲು ಹತ್ತು ವರ್ಷಗಳಲ್ಲಿ ಕೆಲಸ ಮಾಡಿದ್ದಾರೆ. ಮಹಿಳೆಯವರಿಗೂ ಮೋದಿಯವರು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಮಾತನಾಡಿ, ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವವನ್ನು ಹೊಂದಿರುವುದು ಮುಖ್ಯ ಎಂಬ ನಿಟ್ಟಿನಲ್ಲಿ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿಯವರ ಹಲವಾರು ಯೋಜನೆಗಳನ್ನು ಅಸ್ತ್ರವಾಗಿ ಬಳಸಿ ತಾಲೂಕು, ಬೂತ್ ಮಟ್ಟದಲ್ಲಿ ಗೆಲ್ಲಿಸುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭ ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಜಿ.ಕೆ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಮಹಿಳಾ ಬಿಜೆಪಿ ಪ್ರಮುಖರಾದ ಆಶಾ ತಿಮ್ಮಪ್ಪ, ಮೀನಾಕ್ಷಿ ಶಾಂತಿಗೋಡು, ಶಯನಾ ಜಯಾನಂದ, ವಿದ್ಯಾ ಆರ್. ಗೌರಿ, ಜಯಶ್ರೀ ಶೆಟ್ಟಿ, ಜಿಲ್ಲಾ ಬಿಜೆಪಿಯ ಮಂಜುಳಾ ರಾವ್, ಯಶಸ್ವಿನಿ ಶಾಸ್ತ್ರೀ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಅರುಣ್ ಕುಮಾರ್ ಪುತ್ತಿಲ, ಆರ್.ಸಿ. ನಾರಾಯಣ, ಚನಿಲ ತಿಮ್ಮಪ್ಪ ಶೆಟ್ಟಿ, ಹರಿಪ್ರಸಾದ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು. ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.