Bantwal: ಸಶಕ್ತ ಹೆಣ್ಮಕ್ಕಳಿಗೆ ಮೋದಿಯೇ ಗ್ಯಾರಂಟಿ: ಮಾಳವಿಕಾ ಅವಿನಾಶ್
ಬಂಟ್ವಾಳ: ಹೆಣ್ಮಕ್ಕಳಿಗೆ ವಿಶೇಷಗುಣಗಳಿದ್ದು,ಬಿಜೆಪಿಯ ನಾರೀಶಕ್ತಿಯನ್ನು ಕಂಡು ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ನಾರಿಶಕ್ತಿಯ ಸಬಲೀಕರಣ ಮೋದಿಯವರ ಕನಸಾಗಿದ್ದು, ಸಶಕ್ತ ಹೆಣ್ಮಕ್ಕಳಿಗೆ ಪ್ರಧಾನಿ ಮೋದಿಯೇ ಗ್ಯಾರಂಟಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ನಟಿ ಮಾಳವಿಕಾ ಅವಿನಾಶ್ ಹೇಳಿದರು.
ಮಂಗಳವಾರ ಬಿ.ಸಿ. ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ಬಿಜೆಪಿ ಬಂಟ್ವಾಳ ಮಂಡಲ ಮಹಿಳಾ ಮೋರ್ಚಾ ವತಿಯಿಂದ ನಡೆದ ‘ನಾರಿಶಕ್ತಿ ಸಮಾವೇಶ’ದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
ದೇಶದ ಲೋಕಸಭಾ ಚುನಾವಣೆ ನಡೆಯುತ್ತಿದ್ದರೂ ಕಾಂಗ್ರೆಸ್ ಈ ಚುನಾವಣೆಯನ್ನು ವಿಧಾನ ಸಭಾ ಚುನಾವಣೆಯಂತೆ ಬಿಂಬಿಸುತ್ತಿದೆ. ಕಾಂಗ್ರೆಸ್ ನಾಯಕರಲ್ಲಿ ಮೌಢ್ಯ ಅವರಿಸಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಕಾಡುತ್ತಿದ್ದರೂ ರಾಜ್ಯ ಇದರ ನಿರ್ವಹಣೆಗೆ ಪೂರ್ವಸಿದ್ದತೆಯನ್ನೇ ಮಾಡಿಲ್ಲ ಎಂದು ಟೀಕಾ ಪ್ರಹಾರಗೈದರು.
ದ.ಕ. ಜಿಲ್ಲೆಯ ಕಾರ್ಯಕರ್ತರ ಉತ್ಸಾಹ ಗಮನಿಸಿದಾಗ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಗೆಲುವು ನಿಶ್ಚಿತ. ಹಾಗೆಂದು ಅತೀಯಾದ ಆತ್ಮವಿಶ್ವಾಸದಿಂದ ಮೈಮರೆಯದೆ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸುವ ನಿಟ್ಟಿ ಶ್ರಮಿಸುವಂತೆ ಮಾಳವಿಕಾ ಕರೆ ನೀಡಿದರು.
ಬಂಟ್ವಾಳ ಶಾಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಮನೆ, ಮನೆ ಭೇಟಿಯ ಸಂದರ್ಭದಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ಮನೆ ಮತ್ತು ಮನ ಪರಿವರ್ತಿಸಿ ಬಿಜೆಪಿಗೆ ಮತವಾಗಿ ಪರಿವರ್ತನೆ ಮಾಡುವ ಶಕ್ತಿ ಮಹಿಳೆಯರಿಗಿದ್ದು, ನಾರಿಯರು ಚುನಾವಣೆವರೆಗೆ ವಿರಮಿಸದೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸುಳ್ಯ ಶಾಸಕಿ ಭಾಗಿರಥಿ ಮುರಳ್ಯ ಮಾತನಾಡಿ, ನಾರಿ ಶಕ್ತಿ ದುರ್ಗಾಶಕ್ತಿಯಾಗಿ ಕೆಲಸ ಮಾಡಬೇಕು ಆಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಮಹಿಳೆಯರ ಕಷ್ಟವನ್ನು ಅರ್ಥೈಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜಿಲ್ಲೆಯನ್ನು ವಿಕಸಿತ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾರೀಶಕ್ತಿ ತಮ್ಮ ಶಕ್ತಿ ಮೀರಿ ಕೆಲಸ ಮಾಡಿ ಬಿಜೆಪಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಮಾಜಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿದರು. ಬಿಜೆಪಿ ಬಂಟ್ವಾಳ ಮಂಡಲದ ಮಹಿಳಾ ಮೋರ್ಛಾ ಅಧ್ಯಕ್ಷೆ ಭಾರತಿ ಚೌಟ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪಕ್ಷದ ಪ್ರಮುಖರಾದ ದೇವಪ್ಪ ಪೂಜಾರಿ, ಜಗದೀಶ್ ಶೇಣವ, ಧನಲಕ್ಷ್ಮೀ ಗಟ್ಟಿ, ಸುಲೋಚನಾ ಜಿ.ಕೆ. ಭಟ್, ಕಮಾಲಾಕ್ಷಿ ಪೂಜಾರಿ, ಗುಣವತಿ, ಲಖಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಬಂಟ್ವಾಳ ಮಂಡಲ ಪ್ರಭಾರಿ ಪೂಜಾ ಪೈ ಪ್ರಸ್ತಾವನೆಗೈದರು. ಸೀಮಾ ಮಾಧವ ಸ್ವಾಗತಿಸಿದರು. ಹಿರಣ್ಮಯಿ ವಂದಿಸಿ, ಮಣಿಮಾಲ ರೈ ಕಾರ್ಯಕ್ರಮ ನಿರೂಪಿಸಿದರು.