
Beltangadi: ಮಾಜಿ ಶಾಸಕ ವಸಂತ ಬಂಗೇರ ವಿಧಿವಶ
ಬೆಳ್ತಂಗಡಿ: ಕಾಂಗ್ರೆಸ್ ಹಿರಿಯ ನಾಯಕ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕೀಯ ಮುಂದಾಳು ಕೆ. ವಸಂತ ಬಂಗೇರ (79) ಇಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೇದೆ ಸುಬ್ಬ ಪೂಜಾರಿ-ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜ. 15ರಂದು ಜನಿಸಿದ್ದ ಬಂಗೇರರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸಲಿದ್ದು, ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದು ಶಾಸಕರಾದ ಹೆಗ್ಗಳಿಕೆ ವಸಂತ ಬಂಗೇರರದು. 1983 ಮತ್ತು 1985ರಲ್ಲಿ ಬಿಜೆಪಿಯಿಂದ, 1994ರಲ್ಲಿ ಜನತಾದಳದಿಂದ, 2008 ಮತ್ತು 2013ರಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದರು
ಪತ್ನಿ ಸುಜಿತಾ ವಿ ಬಂಗೇರ, ಪುತ್ರಿಯರಾದ ಪ್ರೀತಿತಾ ಹಾಗೂ ಬಿನುತಾ ಸೇರಿದಂತೆ ಅಪಾರ ಬಂಧು ವರ್ಗವನ್ನು ಆಗಲಿದ್ದಾರೆ.
ಸಹೋದರರ ಸವಾಲ್..:
1994ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತನ್ನ ಸಹೋದರ ಕೆ. ಪ್ರಭಾಕರ ಬಂಗೇರರನ್ನು ಜನತಾದಳದಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸೋಲಿಸಿದ್ದರು, 1999ರ ಚುನಾವಣೆಯಲ್ಲಿ ಪ್ರಭಾಕರ ಬಂಗೇರ ವಸಂತ ಬಂಗೇರರನ್ನು ಸೋಲಿಸಿದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರ ಪ್ರಭಾಕರ ಬಂಗೇರ ಎದುರು ಗೆಲುವು ಪಡೆದರು. 2018ರ ಚುನಾವಣೆಯಲ್ಲಿ ಸೋತಿದ್ದರು.
ಅಂತಿಮ ದರ್ಶನಕ್ಕೆ ವ್ಯವಸ್ಥೆ:
ಇಂದು ನಿಧನರಾದ ಮಾಜಿ ಶಾಸಕ ವಸಂತ ಬಂಗೇರ ಅವರ ಅಂತಿಮ ದರ್ಶನಕ್ಕೆ ಮೇ.9 ರಂದು ಬೆಳಿಗ್ಗೆ 10 ಗಂಟೆಯಿಂದ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಬಂಗೇರ ಅವರ ಕೋಟೆಬಾಗಿಲಿನ ಸ್ವಗೃಹದ ಜಮೀನಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲದ ಮಾಹಿತಿ ತಿಳಿಸಿದೆ.