Coffee: ಸಕಾಲಕ್ಕೆ ಬಾರದ ಮಳೆ-ಕಂಗಾಲಾದ ಕಾಫಿ ಬೆಳೆಗಾರರು
ಮಡಿಕೇರಿ/ಹಾಸನ/ಚಿಕ್ಕಮಗಳೂರು: ಈ ವರ್ಷ ರಾಜ್ಯಾದ್ಯಂತ ಮಳೆ ಕೈಕೊಟ್ಟು ರೈತರ ಬದುಕು ಅತಂತ್ರವಾಗಿದ್ದು, ಸಕಾಲಕ್ಕೆ ಮಳೆ ಬಾರದೇ ಮಲೆನಾಡಿನ ಪ್ರಮುಖ ಬೆಳೆಯಾದ ಕಾಫಿ ಬೆಳೆಗಾರರು ಕಂಗಾಲಗಿದ್ದಾರೆ.
ಪ್ರತೀ ವರ್ಷ ಮಲೆನಾಡಿನಲ್ಲಿ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಹಿಂಗಾರು ಮಳೆ ಬಿಳುತ್ತಿದ್ದು, ಈ ವರ್ಷ ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಕಂಗೆಟ್ಟಿದ ಕಾಫಿ ಬೆಳೆಗಾರರಿಗೆ ಹಿಂಗಾರು ಮಳೆಯು ಸಕಾಲಕ್ಕೆ ಬೀಳದ ಕಾರಣದಿಂದ ಕಂಗಾಲಾಗಿದ್ದಾರೆ.
ಮಲೆನಾಡಿನಲ್ಲಿ ಪ್ರತೀ ವರ್ಷಕ್ಕಿಂತ ಹೆಚ್ಚಾಗಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಈ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಕೇವಲ ಒಂದು ದಿನ ಮಳೆಯಾಗಿದ್ದು, ನಂತರ ದಿನದಲ್ಲಿ ಮಳೆ ಬೀಳದ ಕಾರಣ ಬಿಸಿಲಿನ ತಾಪಮಾನ ವಿಪರೀತವಾದ ಹೆಚ್ಚಾಗಿದ್ದು, ಕಾಫಿ ಬೆಳೆ ಬೆಳೆಯುವುದರ ಬದಲು, ಕಾಫಿ ಗಿಡಗಳು ಒಣಗುತ್ತಿದ್ದು, ಒಂದು ವರ್ಷದ ನಷ್ಟದ ಜೊತೆಗೆ ಇಷ್ಟು ವರ್ಷ ಶ್ರಮ ಪಟ್ಟು ಬೆಳೆಸಿದ ಗಿಡಗಳು ಬಿಸಿಲಿನ ಬೆಂಕಿಗೆ ಬೆಂದು ಹೋಗಿವೆ.
ವಾರ್ಷಿಕ ಬೆಳೆಯಾದ ಕಾಫಿ ಬೆಳೆ ಬೆಳೆಯಲು ಸಕಾಲಕ್ಕೆ ಮಳೆ ಬಿದ್ದಲ್ಲಿ ಮಾತ್ರ ಗಿಡದಲ್ಲಿ ಹೂವು ಆಗಿ ಉತ್ತಮ ಬೆಳೆ ಆಗಲು ಸಾಧ್ಯ. ಆದರೆ ಈ ವರ್ಷ ಮಳೆ ಕೈ ಕೊಟ್ಟ ಕಾರಣದಿಂದ ಮುಂದಿನ ವರ್ಷ ನಮ್ಮ ಬದುಕು ಏನು ಎಂಬುವುದಾಗಿ ಯೋಚಿಸುವ ಚಿಂತಾಜನಕ ಸ್ಥಿತಿ ಕಾಫಿ ಬೆಳೆಗಾರರಲ್ಲಿ ನಿರ್ಮಾಣವಾಗಿದೆ.
ಮಲೆನಾಡಿನಲ್ಲಿ 90ಶೇ. ಕಾಫಿ ಬೆಳೆಗಾರರು 3-5 ಎಕ್ಕರೆ ತೋಟವನ್ನು ಹೊಂದಿದ್ದು, ಇವರುಗಳು ನೀರಾವರಿಯ ಮೂಲವನ್ನಾಗಿ ಮಳೆಯನ್ನೇ ಆಶ್ರಯಿಸಿದ್ದು, ಸಕಾಲಕ್ಕೆ ಮಳೆ ಬಾರದೇ ಈ ಬೆಳೆಗಾರರ ಜೀವನ ಕೇಳದಂತಾಗಿದೆ.
ಈ ಬೆಳೆಗಾರರ ಜೀವನವು ಸೋಚನೀಯವಾಗಿದ್ದು, ರಾಜ್ಯ ಸರ್ಕಾರ ಇದಕ್ಕೆ ಸೂಕ್ತವಾದ ಪರಿಹಾರ ನೀಡುವತ್ತ ಗಮನ ಹರಿಸಬೇಕಾಗಿದೆ.
