Konaje: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕೊಣಾಜೆ: ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಆವರಣದ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಮೇ.1 ರಂದು ತಡರಾತ್ರಿ ನಡೆದಿದೆ.
ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿರುವ ಬಗ್ಗೆ ಈ ಹಿಂದೆಯೂ ಕುಲಪತಿಗಳು ಸೇರಿದಂತೆ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆಹಾರದ ಗುಣಮಟ್ಟ ಸುಧಾರಿಸುವ ಬಗ್ಗೆ ಭರವಸೆಯೂ ದೊರಕಿತ್ತು. ಆದರೆ ಅದರ ಅನುಷ್ಠಾನ ಆಗಲಿಲ್ಲ. ಮೇ.1 ರಂದು ರಾತ್ರೆ ಮಧ್ಯಾಹ್ನದ ಹಳಸಿದ ಅನ್ನವನ್ನೇ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗಿತ್ತು ಎಂದು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಯೊಬ್ಬರು ತಿಳಿಸಿದರು.
ಬುಧವಾರ ರಾತ್ರಿ ವಿದ್ಯಾರ್ಥಿ ನಿಲಯದಲ್ಲಿ ಅಡುಗೆಯವರು ಇರಲಿಲ್ಲ. ವಾರ್ಡನ್ ಕೂಡಾ ಇರಲಿಲ್ಲ. ಮಧ್ಯಾಹ್ನ ಉಳಿದ ಅನ್ನ ಹಳಸಿದ್ದರೂ ಅದನ್ನೇ ವಿದ್ಯಾರ್ಥಿಗಳಿಗೆ ನೀಡಲಾಯಿತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಳಸಿದ ಅನ್ನ ಮತ್ತು ಪದಾರ್ಥಗಳನ್ನು ಒಳಗೊಂಡ ಪಾತ್ರೆಗಳನ್ನು ಹೊತ್ತೊಯ್ದು ಕುಲಪತಿಗಳ ನಿವಾಸದೆದುರು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ನಿಲಯದಲ್ಲಿ 450 ವಿದ್ಯಾರ್ಥಿಗಳಿದ್ದಾರೆ. ಪ್ರತೀ ವಿದ್ಯಾರ್ಥಿಯೂ ಊಟೋಪಚಾರ ಮತ್ತು ಇತರ ವೆಚ್ಚವೆಂದು ತಿಂಗಳಿಗೆ 2,900 ರೂ. ಪಾವತಿಸುತ್ತಾರೆ. ಹೀಗೆ ಸಂಗ್ರಹವಾಗುವ ಮೊತ್ತ ಸುಮಾರು 13 ಲಕ್ಷ ರೂ.ಗಳಷ್ಟಾಗುತ್ತದೆ. ಈ ಮೊತ್ತ ಹಾಸ್ಟೆಲ್ ಖಾತೆಗೆ ಜಮಾ ಆಗುತ್ತದೆ. ಹೀಗಿದ್ದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಇಲ್ಲಿ ಸಿಗುತ್ತಿಲ್ಲ ಎಂದೋರ್ವ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರದಂದು ಅಡುಗೆಯವರು ಇರಲಿಲ್ಲ. ಮೇಲುಸ್ತುವಾರಿ ನೋಡಬೇಕಾದ ವಾರ್ಡನ್ ಕೂಡಾ ಹಾಸ್ಟೆಲಿನಲ್ಲಿ ಇರಲಿಲ್ಲ. ಹತ್ತು ದಿನಗಳ ಹಿಂದೆ ವಾರ್ಡನ್, ಕುಲಪತಿ, ರಿಜಿಸ್ಟ್ರಾರ್ ಅವರಿಗೆ ಅವ್ಯವಸ್ಥೆ ಬಗ್ಗೆ ಮನವರಿಕೆ ಮಾಡಲಾಗಿತ್ತು. ಹಾಸ್ಟೆಲ್ ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ ಎಂದು ಪ್ರತಿಭಟನಕಾರರು ನೋವು ವ್ಯಕ್ತಪಡಿಸಿದರು.
ರಾತ್ರಿ ನಾವು ಪ್ರತಿಭಟನೆ ನಡೆಸುತ್ತಿದ್ದರೂ ಸುಮಾರು ಒಂದೂವರೆ ಗಂಟೆ ಯಾವ ಅಧಿಕಾರಿಯೂ ಸ್ಥಳಕ್ಕೆ ಬರಲಿಲ್ಲ. ಕುಲಪತಿ ನಿವಾಸದ ಬಳಿಯಲ್ಲೇ ರಿಜಿಸ್ಟ್ರಾರ್ ನಿವಾಸವಿದೆ. ಅವರೂ ನಮ್ಮ ಸಮಸ್ಯೆ ಕೇಳುವುದಕ್ಕೆ ಬರಲು ವಿಳಂಬ ಮಾಡಿದರು. ಕುಲಪತಿಗಳು ಬೆಂಗಳೂರಿನಲ್ಲಿದ್ದರು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಸ್ಟೆಲ್ ಕೌನ್ಸಿಲ್ ರಚನೆಯಾಗಿದೆ. ಇದಕ್ಕೆ ‘ವೋಯಿಸ್ ಆಫ್ ಸ್ಟೂಡೆಂಟ್ಸ್’ ಎಂದು ಹೆಸರಿಡಲಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಅದು ಪರಿಹರಿಸುತ್ತದೆ. ಆದರೆ ಊಟೋಪಚಾರಗಳಲ್ಲಿಯ ಗಂಭೀರ ಲೋಪದಿಂದಾಗಿ ಈ ಪ್ರತಿಭಟನೆ ನಡೆಸಬೇಕಾಯಿತು ಎಂದು ವಿದ್ಯಾರ್ಥಿ ಪ್ರತಿನಿಧಿಗಳು ಹೇಳುತ್ತಾರೆ.
ನೀರಿನ ಕೊರತೆ:
ವಿಶ್ವವಿದ್ಯಾಲಯದಲ್ಲಿ ಬಿರು ಬೇಸಗೆಯಿಂದಾಗಿ ನೀರಿನ ಕೊರತೆಯೂ ಬಾಧಿಸತೊಡಗಿದೆ. ಕೆಲವು ವಿಭಾಗಗಳಿಗೆ ನೀರು ಬರುತ್ತಿಲ್ಲ. ಕುಡಿಯುವ ನೀರಿಗೆ ಅಭಾವವಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.