Ujire: ಎಸ್.ಡಿ.ಎಂ. ಕಾಲೇಜಿನ ಏಕಶೂನ್ಯಮ್ ಫೆಸ್ಟ್‌ಗೆ ತೆರೆ
ಅಚಲ ನಂಬಿಕೆಯಿಂದ ಸಾಧನೆಗೆ ವಿಫುಲ ಅವಕಾಶ: ವಿವೇಕ್‌ಗೌಡ
ಉಜಿರೆ: ಸ್ವಸಾಮರ್ಥ್ಯದ ಕುರಿತ ಅಚಲವಾದ ನಂಬಿಕೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುವ ಎಚ್ಚರ ಇದ್ದರೆ ಸಾಧನೆಯ ವಿಫುಲ ಅವಕಾಶಗಳು ದೊರಕುತ್ತವೆ ಎಂದು ಛಾಯಾಗ್ರಾಹಕ, ಸಂಕಲನಕಾರ ಹಾಗೂ ಸಾಕ್ಷ್ಯಾಚಿತ್ರ ಛಾಯಾಗ್ರಾಹಕ ವಿವೇಕ್‌ಗೌಡ ಹೇಳಿದರು.
ಇಲ್ಲಿನ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಟಿ ಸೆಲ್‌ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಐಟಿ ಫೆಸ್ಟ್ ‘ಏಕಶೂನ್ಯಂ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಗುರಿ ನಿಶ್ಚಯಿಸುವಾಗ ಆತ್ಮವಿಶ್ವಾಸವಿರಬೇಕಾಗುತ್ತದೆ. ಇದರಿಂದ ಹಾದಿ ಯಾರಿಗೂ ಸೀಮಿತವಾಗದೇ ವಿಸ್ತಾರವಾಗುತ್ತದೆ. ಹೇರಳ ಅವಕಾಶಗಳು ದೊರಕುತ್ತವೆ. ಈ ನಿಟ್ಟಿನಿಲ್ಲಿ ವಿದ್ಯಾರ್ಥಿಗಳು ಆಲೋಚಿಸಬೇಕು ಎಂದರು.
ಮುಂಬರುವ ವರ್ಷಗಳಲ್ಲಿ ಉತ್ತಮ ವೃತ್ತಿ ಜೀವನ ಸಿಗಬೇಕೆಂದಿದ್ದರೆ ಕೇವಲ ಒಂದು ಕೆಲಸ ಹಾಗೂ ಕೌಶಲ್ಯ ಅರಿತಿದ್ದರೆ ಸಾಲುವುದಿಲ್ಲ. ನಾವು ಮಲ್ಟಿಟಾಸ್ಕಿಂಗ್ ಆಗಿರುವುದು ತುಂಬಾ ಅನಿವಾರ್ಯವಾಗಲಿದೆ. ಆದ್ದರಿಂದ ಆಲಸ್ಯ ದೂರವಿರಿಸಿ ಭವಿಷ್ಯದ ಬಗ್ಗೆ ಗಂಭೀರವಾಗಿ ವಿಚಾರ-ವಿನಿಮಯ ಮಾಡಿ, ಕಠಿಣಪರಿಶ್ರಮದ ಮಂತ್ರವೊಂದು ಇದ್ದರೆ ಯಶಸ್ಸಿನ ಕನಸು ನನಸಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್ ಮಾತನಾಡಿ, ಈ ರೀತಿಯ ಫೆಸ್ಟ್‌ಗಳ ಆಯೋಜನೆಯ ಹಿಂದಿರುವ ಮೂಲ ಉದ್ದೇಶ ಭಾಗವಹಿಸುವ ಹಾಗೂ ಆಯೋಜಿಸುವ ವಿದ್ಯಾರ್ಥಿಗಳನ್ನು ತಮ್ಮ ಕಾಲಲ್ಲಿ ತಾವು ನಿಲ್ಲುವಂತೆ ಮಾಡಿಅವರ ಸರ್ವತೋಮುಖ ಬೆಳವಣಿಗೆಗೆ ದಾರಿ ಮಾಡಿಕೊಡುವುದೇ ಆಗಿದೆ ಎಂದು ಹೇಳಿದರು.
ಏಕಶೂನ್ಯಂ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 13ಕ್ಕೂ ಅಧಿಕ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಓವರ್‌ಆಲ್ ಚಾಂಪಿಯನ್ ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತಂಡ ಕಾರ್ಯಕ್ರಮ ರನ್ನರ್‌ಅಪ್ ಆಗಿ ಹೊರಹೊಮ್ಮಿದರು.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್, ಕಾರ್ಯಕ್ರಮದ ಉಪನ್ಯಾಸಕ ಸಂಯೋಜಕಿ ಅಕ್ಷತಾ ಕೆ, ಉಪನ್ಯಾಸಕಿ ದಿವ್ಯಾ ಯಾದವ್, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ಮನೀಶ್‌ಕುಮಾರ್ ಹಾಗೂ ರಕ್ಷಿತಾದಾಸ್ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ರಕ್ಷಿತಾದಾಸ್ ಸ್ವಾಗತಿಸಿ,ವಿದ್ಯಾರ್ಥಿ ಸಂಯೋಜಕ ಮನೀಶ್‌ಕುಮಾರ್ ವಂದಿಸಿದರು. ವಿಭಾಗದ ಅಧ್ಯಾಪಕಿ ಹರಿಣಿ ವಿಜೇತರನ್ನು ಘೋಷಿಸಿ ಮೋನಲ್ ಜೆ.ಆರ್. ಕಾರ್ಯಕ್ರಮ ನಿರೂಪಿಸಿದರು.
