Ujire: ಪರಿಣಾಮಕಾರಿ ಪ್ರೊಫೈಲ್ ರಚನೆ ಕುರಿತು ಕಾರ್ಯಕ್ರಮ
ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗ ಹಾಗೂ ಚಾಣಕ್ಯ ವಿಶ್ವವಿದ್ಯಾನಿಲಯ ಬೆಂಗಳೂರು ಇದರ ಸಹಯೋಗದಲ್ಲಿ ಪರಿಣಾಮಕಾರಿ ಪ್ರೊಫೈಲ್ ರಚನೆ ಕುರಿತು ಸಂವಾದಾತ್ಮಕ ಕಾರ್ಯಕ್ರಮ ಮೇ.2 ರಂದು ನಡೆಯಿತು.
ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ನ್ಯಾಷನಲ್ ಕರಿಕ್ಯುಲಮ್ ಫ್ರೇಮ್ವರ್ಕ್) ಮುಖ್ಯ ಸಲಹೆಗಾರ ಮತ್ತು ಸಂಚಾಲಕ ಡಾ. ಚೇತನ್ ಸಿಂಗಾಯ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರುವಲ್ಲಿ ಪ್ರೊಫೈಲ್ ಮುಖ್ಯ ಪಾತ್ರ ವಹಿಸುತ್ತದೆ. ಪ್ರೊಫೈಲ್ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದರಿಂದ ಅದು ಪರಿಣಾಮಕಾರಿಯಾಗಿರಬೇಕು ಮತ್ತು ಉದ್ಯೋಗದಾತರನ್ನು ಆಕರ್ಷಿಸುವಂತಿರಬೇಕು ಎಂದು ಹೇಳಿದರು.
ವಿದ್ಯಾರ್ಥಿಯಾಗಿರುವಾಗಲೇ ಪ್ರೊಫೈಲ್ ಸಿದ್ಧಪಡಿಸಿಕೊಳ್ಳಬೇಕು. ಯಾವ ಅಂಶವನ್ನು ಉಲ್ಲೇಖಿಸಬೇಕು ಎಂಬುದನ್ನು ತಿಳಿದಿರಬೇಕು. ಉದ್ಯೋಗಕ್ಕೆ ಸೇರಿದ ಬಳಿಕ ‘ಪ್ರೊಫೈಲ್’ನಲ್ಲಿ ಕಾಲಕಾಲಕ್ಕೆ ಬದಲಾವಣೆ, ಮಾರ್ಪಾಡು ತರುವ ಮೂಲಕ ಸಮರ್ಪಕ ನಿರ್ವಹಣೆ ಮಾಡುತ್ತಿರಬೇಕು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳ ರೆಸ್ಯೂಮ್ ಕುರಿತ ಸಂದೇಹ, ಗೊಂದಲಗಳಿಗೆ ಅವರು ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು, ಯಾವುದೇ ಸಂದರ್ಶನ ಎದುರಿಸಬೇಕಾದರೆ ಮುಖ್ಯವಾಗಿ ನಮಗೆ ಆತ್ಮವಿಶ್ವಾಸವಿರಬೇಕು. ಅದರ ಜೊತೆಗೆ ನಮ್ಮನ್ನು ಬಿಂಬಿಸುವ ಬಲಿಷ್ಠ ಪ್ರೊಫೈಲ್ ನಮ್ಮಲ್ಲಿರಬೇಕು ಎಂದರು.
ಚಾಣಕ್ಯ ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ವೆಂಕಟೇಶ್ ಮತ್ತು ಕುಮಾರಸ್ವಾಮಿ, ಎಸ್.ಡಿ.ಎಂ. ಕಾಲೇಜಿನ ಗ್ರಾಮೀಣ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ. ನಾಗರಾಜ ಪೂಜಾರಿ ಮತ್ತು ಅಭಿನಂದನ್ ಕೆ.ಸಿ. ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿನಿಯರಾದ ಸೌಂದರ್ಯ ಬಿ.ಕೆ. ಮತ್ತು ಅನುಪ್ರಿಯ ಘೋಷ್ ಕಾರ್ಯಕ್ರಮ ನಿರೂಪಿಸಿದರು.