
Mangalore: ಸೊಸೈಟಿ ನೀಡುವ ಸಾಲ ಪಡೆದು ಖಾಸಗಿಯವರಿಗೆ ಅಡಿಕೆ ಮಾಡುತ್ತಿದ್ದಾರೆ: ಕೆ. ಸೀತಾರಾಮ ರೈ ಸವಣೂರು ಬೇಸರ
ಮಂಗಳೂರು: ಸೊಸೈಟಿಯಿಂದ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಹಾಗೂ 15 ಲಕ್ಷ ರೂ. ತನಕ 3ಶೇ. ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದರೂ, ನಮ್ಮಲ್ಲಿ ಸಾಲ ಪಡೆದು 2 ರೂ.ಗೆ ಆಸೆ ಪಟ್ಟು ಬೆಳೆಗಾರರು ಖಾಸಗಿಯವರಿಗೆ ಅಡಿಕೆ ಮಾರುತ್ತಿದ್ದಾರೆ ಎಂದು ಮಾಸ್ ಲಿಮಿಟೆಡ್‌ನ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಬೇಸರ ವ್ಯಕ್ತಪಡಿಸಿದರು.
ಅವರು ಮೇ.7 ರಂದು ನಗರದ ಹೊರವಲಯದಲ್ಲಿರುವ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, 15 ಸೆನ್ಸ್ ಜಾಗ ಮೇಲ್ಪಟ್ಟವರಿಗೆ ಅವರ ಜಾಗದ ಆದಾರದಲ್ಲಿ ಮೊದಲು 3 ಲಕ್ಷದ ವರೆಗೆ ಉಚಿತ ಸಾಲ ನೀಡುತ್ತಿದ್ದು, ಈಗ ಅದು 5 ಲಕ್ಷಕ್ಕೆ ಏರಿಕೆಯಾಗಿದೆ. 5 ಎಕ್ಕರೆ ಮೇಲ್ಪಟ್ಟವರಿಗೆ 3ಶೇ. ಬಡ್ಡಿಯಲ್ಲಿ ಮೊದಲು 10 ಲಕ್ಷ ರೂ.ವರೆಗೆ ಸಾಲ ನೀಡುತ್ತಿದ್ದು, ಈಗ 15 ಲಕ್ಷದ ವರೆಗೆ ನೀಡುತ್ತಿದ್ದೆವೆ ಎಂದು ಹೇಳಿದರು.
ದ.ಕ., ಉಡುಪಿ ಹಾಗೂ ಶಿವಮೊಗ್ಗದ ಮ್ಯಾಂಕ್ಕೋಸ್‌ಗೆ ಕೇವಲ 30ಶೇ. ಮಾತ್ರ ಅಡಿಕೆ ನಮ್ಮ ಕೈಗೆ ಸೇರುತ್ತಿದ್ದು, 70ಶೇ.ದಷ್ಟು ಅಡಿಕೆಯನ್ನು ಅಡಿಕೆ ಬೆಳೆಗಾರರು ಖಾಸಗಿವರಿಗೆ ಮಾರುತ್ತಿದ್ದಾರೆ. ಖಾಸಗಿಯವರು ಯಾವುದೇ ಟ್ಯಾಕ್ಸ್ ಕಟ್ಟದೇ, ಕಳ್ಳ ಬಿಲ್‌ಗಳನ್ನು ಮಾಡುವುದರಿಂದ ನಮಗಿಂತ ಅವರಲ್ಲಿ 6-8 ರೂ. ಹೆಚ್ಚು ಬೆಲೆ ಸಿಗುವುದರಿಂದ ನಮ್ಮಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ದೂರಿದರು.
ನಮಗೆ ಈ ವರ್ಷ 168 ಕೋಟಿ ರೂ. ವಹಿವಾಟು ನಡೆಸಿದ್ದು, ಮುಂದಿನ ವರ್ಷ ಇದನ್ನು ದ್ವೀಗುಣ ಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಹೊಸದಾಗಿ ಅಡಿಕೆ ಖರೀದಿ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಸದ್ಯ ಪುತ್ತೂರುನ ಕಾವುನಲ್ಲಿ ಅಡಿಕೆ ಖರೀದಿ ಕೇಂದ್ರ ತೆರೆಯುವ ಯೋಜನೆ ರೂಪಿಸಲಾಗಿದೆ ಎಂದ ಅವರು ಸುಳ್ಯದ ಎಪಿಎಂಸಿಯಲ್ಲಿ ಇದ್ದ ಸಂಸ್ಕರಣ ಘಟವನ್ನು ಮುಚ್ಚಿದ್ದು, ಈ ವರ್ಷ ಮತ್ತೆ ಅದನ್ನು ತೆರೆಯುವ ಮೂಲಕ ಬೆಳೆಗಾರರಿಗೆ ಉಪಯುಕ್ತ ಮಾಡಿಕೊಡಲಾಗುವುದು ಎಂದು ಹೇಳಿದರು.
ಅಡಿಕೆ ಖರೀದಿ ಕೇಂದ್ರಗಳಿಗೆ ಅಧಿಕಾರಿಗಳು ಬೇಕಾಗಿದ್ದು, ಅಡಿಕೆ ಬೆಳೆಗಾರರ ಪದವಿ ಪಡೆದಂತಹ ಮಕ್ಕಳಿಗೆ ಸ್ಟೈಪೆಂಡ್ ಸಹಿತ ತರಬೇತಿಯನ್ನು ನೀಡಿ ಅವರುಗಳನ್ನು ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲಾಗುವುದು ಎಂದ ಅವರು ಉತ್ತರ ಭಾರತದಲ್ಲಿ ಒಂದು ಮಾರಾಟ ಕೇಂದ್ರವನ್ನು ತೆರೆಯಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
2021-22ರಲ್ಲಿ 174 ಕೋ.ರೂ ವ್ಯವಹಾರ ಮಾಡಿದ್ದು, 2022-23ರಲ್ಲಿ 156 ಕೋ.ರೂ. ವ್ಯವಹಾರ ಮಾಡಿದೆ ಎಂದರು.
ಸಂಸ್ಥೆಯು 2023-24ನೇ ಸಾಲಿನಲ್ಲಿ 28 ಲಕ್ಷ ಲಾಭ ಗಳಿಸಿದೆ. 2021-22ರಲ್ಲಿ 35.06 ಲಕ್ಷ ಲಾಭ ಮತ್ತು 2022-23ರಲ್ಲಿ 30.70 ಲಕ್ಷ ಲಾಭ ಗಳಿಸಿತ್ತು. ಲಾಭಾಂಶಗಳ ಹಂಚಿಕೆಯೂ ಸರಿಯಾದ ರೀತಿಯಲ್ಲಿ ಮಾಡಲಾಗುತ್ತಿದೆ. 2020-21ರಲ್ಲಿ ಶೇ.10 ಮತ್ತು 2021-22ರಲ್ಲಿ ಶೇ.8 ಹಾಗೂ 2022-23ರಲ್ಲಿ ಶೇ. 7ರಷ್ಟು ಲಾಭಾಂಶವನ್ನು ಸದಸ್ಯರಿಗೆ ನೀಡಲಾಗಿದೆ ಎಂದರು.
ಹೊಸ ಖರೀದಿ ಕೇಂದ್ರ ತೆರೆಯುವ ಉದ್ದೇಶ..
ಉಡುಪಿ ಜಿಲ್ಲೆ ಸೇರಿದಂತೆ ಮಾಸ್ ಲಿಮಿಟೆಡ್ ಸದ್ಯ 10 ಕಡೆಗಳಲ್ಲಿ ಅಡಿಕೆ ಖರೀದಿ ಕೇಂದ್ರಗಳನ್ನು ಹೊಂದಿದೆ. ಉಪ್ಪಿನಂಗಡಿ, ಸವಣೂರು, ಬೆಳ್ಳಾರೆ, ಸುಳ್ಯ, ಮಂಚಿ, ಅಜೆಕಾರು, ಗುರುವಾಯನಕೆರೆ, ಮಾನಂಜೆ, ಹಳ್ಳಿಹೊಳೆ ಮತ್ತು ಬೈಕಾಂಪಾಡಿ ಕೇಂದ್ರ ಕಚೇರಿಯಲ್ಲಿ ಅಡಿಕೆ ಖರೀದಿಸಲಾಗುತ್ತಿದೆ. ಉಪ್ಪಿನಂಗಡಿ ಮತ್ತು ಸುಳ್ಯ ಶಾಖೆಗಳಲ್ಲಿ ಕೃಷಿಕರಿಂದ ರಬ್ಬರ್‌ನ್ನು ಕೂಡ ಖರೀದಿಸಲಾಗುತ್ತಿದೆ. ಸಂಘದಲ್ಲಿ ಈಗ ಒಟ್ಟು 5874 ಸದಸ್ಯರಿದ್ದು, ರೂ.212 ಕೋಟಿ ಪಾಲು ಬಂಡವಾಳ ಹೊಂದಿದೆ ಎಂದವರು ಹೇಳಿದರು.
ಅಡಿಕೆ ಮತ್ತು ರಬ್ಬರ್ ಕರಾವಳಿ ಜಿಲ್ಲೆಗಳ ಆರ್ಥಿಕತೆಯ ಜೀವಾಳ. ಅಡಿಕೆಯಲ್ಲಿ ಕೋಟ್ಯಾಂತರ ರೂ. ವ್ಯವಹಾರ ನಡೆಯುತ್ತಿದೆ. ಆದರೆ ಇದರಲ್ಲಿ ಶೇ.70ರಷ್ಟು ವ್ಯವಹಾರ ಖಾಸಗಿ ವರ್ತಕರು ನಡೆಸುತ್ತಿದ್ದಾರೆ. ಕೃಷಿಕರಿಗೆ ಸಹಕಾರಿ ಸಂಘಗಳು ಶೂನ್ಯ ಬಡ್ಡಿ ದರ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಹಾಗಾಗಿ ಕೃಷಿಕರು ಸಹಕಾರಿ ಸಂಸ್ಥೆಗಳಿಗೆ ಅಡಿಕೆ ಮಾರಾಟ ಮಾಡುವ ಮೂಲಕ ಸಹಕಾರ ಕ್ಷೇತ್ರದ ಬಲವರ್ಧನೆಗೆ ಸಹಕರಿಸಬೇಕು ಎಂದು ಹೇಳಿದರು.
ಮಾಸ್ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ಶಿವಾಜಿ ಸುವರ್ಣ, ಪುಷ್ಪರಾಜ್ ಅಡ್ಯಂತಾಯ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಮಹಾಬಲೇಶ್ವರ ಭಟ್, ಮಾರ್ಕೆಟಿಂಗ್ ಅಧಿಕಾರಿ ಲೋಕೇಶ್ ಉಪಸ್ಥಿತರಿದ್ದರು.