Mangalore: ದತ್ತನಗರ ನಿವಾಸಿಗಳ ಸಂಘದ ವಾರ್ಷಿಕೋತ್ಸವ-ಸ್ವಚ್ಛ, ಸ್ವಸ್ಥ, ಸ್ವಾಭಿಮಾನದ ಭಾರತ ನಿರ್ಮಾಣವಾಗಲಿ: ಕಲ್ಲಡ್ಕ ಪ್ರಭಾಕರ ಭಟ್
ಶಕ್ತಿನಗರ: ಸ್ವಚ್ಛ, ಸ್ವಸ್ಥ ಸ್ವಾಭಿಮಾನದ ಭಾರತ ನಿರ್ಮಾಣವಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಪರಿಕಲ್ಪನೆ ವೇಗ ಪಡೆದುಕೊಂಡಿದ್ದು, ದತ್ತನಗರದ ಬಡಾವಣೆಯ ನಿವಾಸಿಗಳು ಇಂತಹ ಪರಿಕಲ್ಪನೆಗೆ ಕೈ ಜೋಡಿಸಿದಂತೆ ಸರ್ವರೂ ಮುಂದಾದಾಗ ದೇಶ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಬಿಕರ್ನಕಟ್ಟೆ ಸಮೀಪದ ದತ್ತನಗರದಲ್ಲಿ ಇಲ್ಲಿನ ನಿವಾಸಿಗಳ ಸಂಘದ ವತಿಯಿಂದ ದತ್ತನಗರ ಬಯಲು ರಂಗ ಮಂದಿರದಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಟೂತ್ ಪೇಸ್ಟ್ ನಿಂದ ಹಿಡಿದು ಸಾಬೂನು ವರೆಗೆ ಇಂದು ನಾವು ಬಳಕೆ ಮಾಡುವ ಹೆಚ್ಚಿನ ವಸ್ತು ವಿದೇಶಿಯದ್ದಾಗಿದೆ, ನಮ್ಮ ಹಣ ವಿದೇಶಕ್ಕೆ ಹೋಗಿ ಅಲ್ಲಿ ಅಭಿವೃದ್ಧಿಯಾಗುವ ಬದಲು ಸ್ವಾಭಿಮಾನದ ಸಂಕೇತವಾಗಿ ನಮ್ಮ ಸ್ಥಳೀಯ ವಸ್ತುಗಳನ್ನು ಬಳಸಿ ದೇಶದೊಳಗೆ ಆರ್ಥಿಕ ಶಕ್ತಿ ಹೆಚ್ಚುವಂತೆ ಮಾಡಬೇಕಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ತಿಳಿಯಪಡಿಸಿ ಅದನ್ನು ಮುಂದುವರೆಸುವ ಶಕ್ತಿಯನ್ನು ನೀಡಬೇಕಿದೆ ಎಂದರು.
ಬಡಾವಣೆಗಳಲ್ಲಿ ಇರುವ ಕುಟುಂಬಗಳ ನಡುವೆ ಪರಸ್ಪರ ಐಕ್ಯತೆ ಇದ್ದಾಗ ಕೌಟುಂಬಿಕ ವಾತಾವಣದ ಜತೆ ಜತೆಗೆ ಒಗ್ಗಟ್ಟು ಬೆಳೆಯುತ್ತದೆ. ದತ್ತನಗರ ನಿವಾಸಿಗಳ ಸಂಘ ಈ ನಿಟ್ಟಿನಲ್ಲಿ ಮಾದರಿ ಸಂಘ ರಚಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ದತ್ತನಗರ ಮನಪಾ ವ್ಯಾಪ್ತಿಯಲ್ಲಿ ಅಭಿವೃದ್ಧಿ, ಸ್ವಚ್ಛತೆಯಲ್ಲಿ ಮಾದರಿಯಾಗಿದೆ. ಇದಕ್ಕೆ ಇಲ್ಲಿನ ನಿವಾಸಿಗಳ ಸಂಘದ ಶ್ರಮ ಕಾರಣ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಮಾತನಾಡಿ, ದತ್ತನಗರ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿಯ ಘಟಕ ಸ್ಥಾಪಿಸಿ ಗೊಬ್ಬರ ತಯಾರಿಸಿ ಪರಿಸರ ಸಹ್ಯ ವಾತಾವರಣ ನಿರ್ಮಿಸುವ ಉದ್ದೇಶವಿದೆ. ಪಾಲಿಕೆ ಇದಕ್ಕೆ ಸಹಕರಿಸಬೇಕೇಂದರು.
ಮನಪಾ ಸದಸ್ಯೆ ವನಿತ ಪ್ರಸಾದ್ ಮಾತನಾಡಿ, ದತ್ತನಗರದಲ್ಲಿ ಮುಂದಿನ ದಿನಗಳಲ್ಲಿ 1 ಕೋಟಿ ರೂ. ಕಾಮಗಾರಿ ನಡೆಯಲಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯೋಧರು, ಕಲಾವಿದರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಮಾಜಿಕ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಲಾಯಿತು. ಕಳೆದ ಬಾರಿ ಕಂಬಳದ ಕೋಣಗಳನ್ನು ಗುರುತಿಸಲಾಗಿದೆ. ಈ ಬಾರಿ ವಿಶೇಷವಾಗಿ ಪೊಲೀಸ್ ದಳದ ತನಿಖಾ ಶ್ವಾನ ಬಬ್ಲಿ ಹಾಗೂ ಇದರ ತರಬೇತುದಾರರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವಿಜಯಕುಮಾರ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಕರುಣಾಕರ ಶೆಟ್ಟಿ, ದತ್ತನಗರ ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸಂಚಾಲಕ ಪ್ರವೀಣ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ರಾಜೇಶ್ ನಾಯ್ಕ್ ವರದಿ ವಾಚಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಿವಾಸಿಗಳ ಸಂಘದ ಸದಸ್ಯರಿಂದ ಗಾಯನ, ನೃತ್ಯ, ನಾಟಕ ಕಾರ್ಯಕ್ರಮ ಜರಗಿತು.
