Mangalore: ಕರಾವಳಿತಲ್ಲಿ ಹೆಚ್ಚಿದ ತಾಪಮಾನ- ಕಾಲೇಜು ವಿದ್ಯಾರ್ಥಿಗಳಿಂದ ರಜೆ ಘೋಷಿಸಲು ಆಗ್ರಹ
ಮಂಗಳೂರು: ಕರಾವಳಿಯಲ್ಲಿ ಶಾಖಾಘಾತ ಹೆಚ್ಚುವ ಸಾಧ್ಯತೆಯನ್ನು ತಜ್ಞರು ನೀಡಿರುವ ಬೆನ್ನಲ್ಲೇ ಬಿಸಿಲಿನ ಝಳದಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಿಗೆ ವಾರ ಅವಧಿಯ ರಜೆ ಘೋಷಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಈ ಬಾರಿ ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ ದಾಖಲಾಗುತ್ತಿದ್ದು, ಉಡುಪಿಯಲ್ಲಿ ಈಗಾಗಲೇ ವ್ಯಕ್ತಿಯೊಬ್ಬರು ಶಾಖಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಕೋವಿಡ್ ಪೂರ್ವದಲ್ಲಿ ಕಾಲೇಜುಗಳಿಗೆ ಏಪ್ರಿಲ್ ತಿಂಗಳು ಪರೀಕ್ಷೆ ಮತ್ತು ಆ ಬಳಿಕ ಬೇಸಗೆ ರಜೆ ಇರುತ್ತಿತ್ತು. ಕಳೆದ ಎರಡು ವರ್ಷಗಳಿಂದ ಸೆಮಿಸ್ಟರ್ ಕಾಲಾವಧಿ ಹೊಂದಾಣಿಕೆ ಮಾಡುವುದಕ್ಕಾಗಿ ಕಾಲೇಜುಗಳ ವೇಳಾ ಪಟ್ಟಿಯನ್ನು ಬದಲಿಸಲಾಯಿತು. ಇದರಿಂದಾಗಿ ಮೇ ತಿಂಗಳಲ್ಲಿಯೂ ತರಗತಿಗಳು ನಡೆಯುತ್ತಿವೆ. ಈ ಬಾರಿ ಹವಾಮಾನ ವೈಪರಿತ್ಯದ ಪರಿಣಾಮ ಗಂಭೀರ ರೀತಿಯಲ್ಲಿದ್ದು ಕಾಲೇಜು ವಿದ್ಯಾರ್ಥಿಗಳು ಇದರಿಂದ ಬಹಳ ತೊಂದರೆಗೀಡಾಗಿದ್ದಾರೆ.
ಬೆಳಿಗ್ಗೆ ರಶ್ ಇರುವ ಬಸ್ಸ್ ಹಿಡಿದು ಕಾಲೇಜು ತಲುಪುವಾಗ ಬೆವರಿನಿಂದ ಒದ್ದೆ ಮುದ್ದೆಯಾಗಿರುತ್ತೇವೆ, ಬಳಿಕ ಬಿಸಿಲಿನಲ್ಲಿ ಪ್ರಾರ್ಥನೆ, ಚಿಂತನಗಳು ನಡೆಯುತ್ತವೆ. ತರಗತಿಗಳಿಗೆ ಬಂದರೆ ಪಾಠ ಕೇಳುವುದಕ್ಕೆ ಬದಲು ನಿದ್ದೆ ಮಾಡುವಂತಹ ಸ್ಥಿತಿಗೆ ಬರುತೇವೆ ಎನ್ನುತ್ತಾರೆ ಕಾಲೇಜಿನ ಓರ್ವ ವಿದ್ಯಾರ್ಥಿನಿ.
ನಮ್ಮ ಕಾಲೇಜು ನೀರು ಪೂರೈಕೆ ಸಂಪೂರ್ಣ ಮಹಾನಗರ ಪಾಲಿಕೆಯನ್ನೇ ಅವಲಂಬಿಸಿದೆ. ಎರಡು ಮೂರು ದಿನಗಳಿಗೊಮ್ಮೆ ನೀರು ಬರುವುದರಿಂದ ನಿದ್ದೆ ಬರುತ್ತಿದೆ, ಮುಖ ತೊಳೆಯುವ ಎಂದರೆ ನಳ್ಳಿಯಲ್ಲಿ ನೀರು ಇರುವುದಿಲ್ಲ ಎನ್ನುತಾರೆ ನಗರ ಕಾಲೇಜೊಂದರಲ್ಲಿ ಬಿ.ಸಿ.ಎ. ವಿದ್ಯಾರ್ಥಿ.
ನೀರಿನ ಕೊರತೆ ಒಂದೆಡೆಯಾದರೆ ಆಗಾಗ ವಿದ್ಯುತ್ ಕೈಕೊಡುತ್ತಿರುವುದರಿಂದ ಪ್ರಾಯೋಗಿಕ ತರಗತಿಗಳಲ್ಲಿ ಬಹಳ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಇಡೀ ಪ್ರಯೋಗವನ್ನು ರಿಪೀಟ್ ಮಾಡಬೇಕಾದ ಸ್ಥಿತಿ ಬರುತ್ತದೆ ಎನ್ನುತ್ತಾರೆ ಭೌತಶಾಸ್ತ್ರದ ವಿದ್ಯಾರ್ಥಿನಿಯೊಬ್ಬರು.
ಕ್ಲಾಸ್ ಮಾಡುವುದಾದರೂ ಹೇಗೆ? ತರಗತಿಗಳಲ್ಲಿ ಅರ್ಧಾಂಶ ಕ್ಲಾಸು ಡೆಸ್ಕ್‌ಗಳ ಮೇಲೆ ತಲೆಯಾನಿಸಿ ನಿದ್ದೆಗೆ ಜಾರಿರುತ್ತದೆ. ಎಂದು ಪ್ರಶಿಸುತ್ತಾರೆ ವಾಣಿಜ್ಯಶಾಸ್ತ್ರದ ಉಪನ್ಯಾಸಕರರೊಬ್ಬರು.
ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಗಳಾಗಿ ಬಂದಿರುವ ಪ್ರೊ. ಪಿ.ಎಲ್. ಧರ್ಮ ಅವರು ವಿದ್ಯಾರ್ಥಿಗಳ ಈ ದಯನೀಯ ಪರಿಸ್ಥಿತಿಯನ್ನು ನೋಡಿಯಾದರೂ ವಾರ ಕಾಲ ಕಾಲೇಜುಗಳಿಗೆ ರಜೆ ನೀಡಲಿ. ಬಾಕಿಯಾಗುವ ಪಾಠ ಪ್ರವಚನಗಳನ್ನು ಪೂರೈಸಲು ಶೈಕ್ಷಣಿಕ ವೇಳಾ ಪಟ್ಟಿಯನ್ನು ವಾರ ಕಾಲ ವಿಸ್ತರಿಸಲಿ ಎನ್ನುತ್ತಾರೆ ಪೋಷಕರೊಬ್ಬರು. ಕಾಲೇಜಿಗೆ ಪೂರೈಕೆಯಾದ ಟ್ಯಾಂಕರ್ ನೀರು ಕುಡಿದ ಅವರ ಪುತ್ರಿಯ ಆರೋಗ್ಯ ಸ್ಥಿತಿಯಲ್ಲಿ ಏರು ಪೇರಾದ ಘಟನೆಯನ್ನು ನೆನಪಿಸಿಕೊಳ್ಳುವ ಅವರು ಮಂಗಳೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ರಜೆ ಘೋಷಿಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಿಸಲಿ ಎನ್ನುತ್ತಾರೆ.
ಜಿಲ್ಲೆಯ ಬಹುತೇಕ ಗ್ರಾಮಾಂತರ ಕಾಲೇಜುಗಳೂ ಕೂಡಾ ಈಗ ನೀರಿನ ಕೊರತೆಯನ್ನು ಎದುರಿಸುತ್ತಿವೆ. ವಿದ್ಯುತ್ ಕೈಕೊಡುತ್ತಿರುವುದರಿಂದ ತರಗತಿ ಕೊಠಡಿಗಳಲ್ಲೂ ಬೆವರುವಂತಾಗಿದೆ. ಬಿಸಿಲ ಝಳದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ರಜೆ ಅನಿವಾರ್ಯ ಎಂದು ವಾದಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
(ಚಿತ್ರ: ಅನುಷ್ ಪಂಡಿತ್)

