Moodubidire: ಮಹಾವೀರ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ತುಳುನಾಡ ಸಿರಿ ಮದಿಪು-2024’ಕ್ಕೆ ಚಾಲನೆ

Moodubidire: ಮಹಾವೀರ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ತುಳುನಾಡ ಸಿರಿ ಮದಿಪು-2024’ಕ್ಕೆ ಚಾಲನೆ

ಶೈಕ್ಷಣಿಕದೊಳಗಡೆ ತುಳು ಭಾಷೆ ಬರಬೇಕು: ತಾರಾನಾಥ ಗಟ್ಟಿ 


ಮೂಡುಬಿದಿರೆ: ನಮ್ಮ ತುಳು ಭಾಷೆ ಮೃದುವೂ ಹೌದು ಮತ್ತು ಮೆದುವೂ ಹೌದು. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ನಮ್ಮ ತುಳು ಲಿಪಿ ಮಲೆಯಾಳಂ ಲಿಪಿಗೂ ಮೂಲವಾಗಿದೆ. ನಾವು ಸರಳವಾದ ತುಳುವನ್ನು ಮಾತನಾಡುವುದಲ್ಲದೆ ಇದನ್ನು ತುಳವರಲ್ಲದವರಿಗೆ ಕಲಿಸುವ ಹಾಗೂ ಈ ಭಾಷೆಯನ್ನು ಶೈಕ್ಷಣಿಕದೊಳಗಡೆ ತರುವ ಮೂಲಕ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಹೇಳಿದರು.

ಮಹಾವೀರ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ೧೮ನೇ ವರ್ಷದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ತುಳುನಾಡ ಸಿರಿ ‘ಮದಿಪು-2024’ ಉದ್ಘಾಟಿಸಿ ಮಾತನಾಡಿದರು.

1994ರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ತುಳು ಅಕಾಡೆಮಿಯನ್ನು ಸ್ಥಾಪಿಸಿದ್ದು ಅಲ್ಲಿಂದ ಶಾಲಾ ಕಾಲೇಜುಗಳಲ್ಲಿ ತುಳು ಸಂಘಗಳು, ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಭಾಷೆಯ ಗೌರವ ಹೆಚ್ಚಿದೆ. ಅಲ್ಲದೆ ಹೈಸ್ಕೂಲಿನಿಂದ ತೊಡಗಿ ಸ್ನಾತಕೋತ್ತರ ಹಂತದವರೆಗೆ ತುಳು  ಕಲಿಕೆಗೆ ಅವಕಾಶ  ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದ ಅವರು ಶ್ರೀ ಮಹಾವೀರ ಕಾಲೇಜಿನಲ್ಲೂ ತುಳು ತರಗತಿ ಕನಿಷ್ಟ ಮಟ್ಟದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿರಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ, ಕಾಲೇಜಿನ ಹಳೆ ವಿದ್ಯಾರ್ಥಿ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ತುಳು ಭಾಷೆ, ಸಂಸ್ಕೃತಿ ಪ್ರಾಕೃತಿಕ ಹಿನ್ನೆಲೆಯನ್ನೂ ಹೊಂದಿದೆ, ಸೂರ್ಯಚಂದ್ರರಿರುವ ತನಕ ಉಳಿಯಲಿದೆ ಎಂಬುದಕ್ಕೆ ಸೂರ್ಯಚಂದ್ರರು ತುಳು ಆರಾಧನ ಕ್ರಿಯೆಗಳಲ್ಲಿ  ಚಿಹ್ನೆಯಾಗಿರುವುದೇ ಸಾಕ್ಷಿ ಯಾಗಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಯಾದ ಮೊದಲ ತುಳುವ ವೀರಪ್ಪ ಮೊಯಿಲಿ ಅವರು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಆಗ್ರಹಿಸಿದವರು ಮತ್ತು ಸಿಇಟಿಯಂಥ ಕ್ರಾಂತಿಕಾರಿ ಪರೀಕ್ಷೆಯ ಅಧ್ಯಾಯ ತೆರೆದು ಬಡಜನರಿಗೂ ಉನ್ನತ ಶಿಕ್ಷಣದ ಬಾಗಿಲು ತೆರೆದವರು ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಭಾಗವಹಿಸಿದ್ದರು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಯುವಜನರು ತುಳು ಆಚಾರ ವಿಚಾರ ಸಂಸ್ಕೃತಿ ತಿಳಿದು, ಉಳಿಸಿ ಬೆಳೆಸುವ ಉದ್ದೇಶದಿಂದ ಕಳೆದ 18 ವರ್ಷಗಳಿಂದಲೂ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.

ಮಹಾವೀರ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ರಮೇಶ ಭಟ್, ನಿತಿನ್ ಸುವರ್ಣ ಸಹಿತ ವಿದ್ಯಾರ್ಥಿ ಸಂಘ, ತುಳು ಸಂಘದ ಪದಾಧಿಕಾರಿಗಳು, ತೀರ್ಪುಗಾರರಾದ ಮುದ್ದುಮೂಡುಬೆಳ್ಳೆ. ಕೆ.ಕೆ. ಪೇಜಾವರ್, ಅಕ್ಷತಾ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಜಯಂತಿ ಎಸ್. ಬಂಗೇರ, ಬೆದ್ರದ ತುಳುಕೂಟದ ಸದಾನಂದ ನಾರಾವಿ  ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ:

ದರೆಗುಡ್ಡೆಯ ನಾಟಿ ವೈದ್ಯೆ ಪ್ರೇಮಾ ಪೂಜಾರ್ತಿ ಇವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಸಂಯೋಜಕಿ, ಮುಖ್ಯ ಗ್ರಂಥಪಾಲಕಿ ನಳಿನಿ ಕೆ. ಸಮ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿ, ಸಂಯೋಜಕಿ ಪೂರ್ಣಿಮಾ ಶೆಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ತುಳು ಕೃತಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article