Udupi: ಬಿಸಿಲ ತಾಪಮಾನಕ್ಕೆ ವ್ಯಕ್ತಿ ಬಲಿ
Wednesday, May 1, 2024
ಉಡುಪಿ: ರಾಜ್ಯಾದ್ಯಂತ ಬಿಸಿಲ ಧಗೆ ಹೆಚ್ಚುತ್ತಿದ್ದು, ಉಡುಪಿಯಲ್ಲೂ ಬಿಸಿಲ ತಾಪಮಾನ ಹೆಚ್ಚಾಗಿದೆ. ಕಡಲ ತಡಿಯ ಉಡುಪಿಯಲ್ಲಿಯೂ ತಾಪಮಾನ ಹೆಚ್ಚಾಗಿದ್ದು, 33-38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದರೆ, 42 ಡಿಗ್ರಿಯಷ್ಟು ತಾಪಮಾನದ ಅರಿವಾಗುತ್ತಿದೆ. ಈ ಪ್ರಮಾಣದ ಬಿಸಿಲು ಜಿಲ್ಲೆಯಲ್ಲಿ ಇದುವರೆಗೆ ಕಂಡುಬಂದಿಲ್ಲ ಎನ್ನಲಾಗುತ್ತಿದೆ.
ಬಿಸಿಲಿನ ತಾಪಕ್ಕೆ ವ್ಯಕ್ತಿಯೋರ್ವ ಕುಸಿದು ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ. ಮೃತರನ್ನು ಬದಿಯಪ್ಪ (37) ಎಂದು ಗುರುತಿಸಲಾಗಿದೆ. ಮೂಲತಃ ಹಾವೇರಿಯವರಾದ ಅವರು ಕೂಲಿಕಾರ್ಮಿಕರಾಗಿ ಕಳೆದ 6 ತಿಂಗಳ ಹಿಂದೆ ಉಡುಪಿಗೆ ಬಂದಿದ್ದರು.
ಎಂದಿನಂತೆ ಇಂದು ಕೆಲಸ ನಿರತರಾಗಿದ್ದಾಗ ನಗರದ ಸಿಟಿ ಬಸ್ ನಿಲ್ದಾಣ ಬಳಿ ಕುಸಿದು ಬಿದ್ದರು. ತಕ್ಷಣ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗಮಧ್ಯೆ ಅವರು ಮೃತಪಟ್ಟರು.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿ ಗಾಳಿ ಹಾಗೂ ತೀವ್ರ ಬಿಸಿಲ ಬೇಗೆ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಜನತೆಗೆ ಸೂಚಿಸಿದೆ.