
Bantwal: ನೇಣು ಬಿಗಿದು ಯುವಕನ ಆತ್ಮಹತ್ಯೆ
Thursday, June 27, 2024
ಬಂಟ್ವಾಳ: ಯುವಕನೋರ್ವ ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾ.ನ ನರಿಕೊಂಬು ಗ್ರಾಮ ಏಲಬೆ ಎಂಬಲ್ಲಿ ನಡೆದಿದೆ.
ಇಲ್ಲಿನ ಶೇಖರ ಅವರ ಎರಡನೇ ಪತ್ರ ರಮೇಶ್ (27) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಯಾವುದೋ ವಿಷ ಪದಾರ್ಥ ಸೇವಿಸಿ ಬಳಿಕ ಕಿಟಕಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಶ್ರಮ ಜೀವಿಯಾಗಿದ್ದ ಈತ ಇಲ್ಲಿನ ಸ್ಥಳೀಯ ಜಿನಸು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಈತನ ಅಣ್ಣ ಕೂಡ ಕಳೆದ ವರ್ಷ ಇವರ ಹಳೇಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಶೇಖರ ಪೂಜಾರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರು ಕೂಡ ಆತ್ಮಹತ್ಯೆಗೆ ಶರಣಾಗಿರುವುದು ಸ್ಥಳೀಯವಾಗಿ ನಾನಾ ನಿಗೂಢತೆಗೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಬಿಜೆಪಿ ಮುಖಂಡ ಪುರುಷೋತ್ತಮ ಸಾಲಿಯಾನ್ ಸಹಿತ ಸ್ಥಳೀಯ ಪ್ರಮುಖರು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದ್ದಾರೆ. ಬಂಟ್ವಾಳ ನಗರ ಠಾಣಾ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.