
Beltangadi: ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ-ಯುವ ಉದ್ಯಮಿ ಮೃತ್ಯು
Saturday, June 29, 2024
ಬೆಳ್ತಂಗಡಿ: ಅತಿ ವೇಗದಲ್ಲಿ ಬಂದ ಕಾರು ನಿಯಂತ್ರಣ ಕಳೆದುಕೊಡು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಯುವ ಉದ್ಯಮಿ ಯುವಕ ಮೃತಪಟ್ಟಿರುವ ಘಟನೆ ಉಜಿರೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಬೆಳ್ತಂಗಡಿ ನಿವಾಸಿ ಉದ್ಯಮಿ ಪ್ರಜ್ವಲ್ ನಾಯಕ್(35) ಮೃತ ಯುವಕ. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕೂಡಲೇ ಸ್ಥಳೀಯರ ಸಹಕಾರದಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ೪ ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಪ್ರಜ್ವಲ್ ನಾಯಕ್ ಅವರು ಬೆಳ್ತಂಗಡಿ ಸಂತೆಕಟ್ಟೆ ನಿವಾಸಿ, ಉದ್ಯಮಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲಕ ಪ್ರಮೋದ್ ಆರ್. ನಾಯಕ್ ಅವರ ಪುತ್ರ. ಪ್ರಜ್ವಲ್ ಕೂಡಾ ಉದ್ಯಮಿಯಾಗಿದ್ದು, ಉಜಿರೆಯ ಡಿ.ಎಂ. ಗೌಡ ಕಾಂಪ್ಲೆಕ್ಸ್‌ನಲ್ಲಿ ಗೇಮಿಂಗ್ ಶಾಪ್ ಮಾಲಕರಾಗಿದ್ದರು.