Mangalore: ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ-ಪದವೀಧರ ಕ್ಷೇತ್ರ ಶೇ.72.87: ಶಿಕ್ಷಕರ ಕ್ಷೇತ್ರ ಶೇ.75.71 ಮತದಾನ
ಮಂಗಳೂರು: ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಯಶಸ್ವಿಯಾಗಿ ನಡೆದಿದ್ದು, ಸಂಪೂರ್ಣ ಶಾಂತಯುತವಾಗಿತ್ತು.
ಜಿಲ್ಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಶೇ.72.87 ಮತದಾನವಾಗಿದ್ದರೆ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇ.75.71 ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಜಿಲ್ಲೆಯ ಒಟ್ಟು ಪದವೀಧರ ಕ್ಷೇತ್ರಕ್ಕೆ 24 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 16 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಿತು. ಹಿಂದೆಂದಿಂಗಿಂತಲೂ ಈ ಬಾರಿ ಪದವೀಧರ ಕ್ಷೇತ್ರದ ಮತದಾರರಲ್ಲಿ ಹೆಚ್ಚಿನ ಆಸಕ್ತಿ ಕಂಡು ಬಂದಿದ್ದು, ಎರಡು ದಶಕಗಳಿಂದೀಚೆಗೆ ಪದವಿ ಗಳಿಸಿದವರೂ ಪ್ರಥಮ ಬಾರಿಗೆ ಮತದಾನದ ಮೂಲಕ ಹಲವರು ಸಂಭ್ರಮ ವ್ಯಕ್ತಪಡಿಸಿದರು.
ಪದವೀಧರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಸ್ಥಾಪಿಸಲಾದ ಒಟ್ಟು 16 ಮತಗಟ್ಟೆಗಳಲ್ಲಿ ಬೆಳಗ್ಗೆ ೮ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾವಣೆಯಾಗಿವೆ.
ಬೆಳಗ್ಗೆ ಸುಮಾರು 10-11 ಗಂಟೆವರೆಗೆ ಜಿಲ್ಲೆಯ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾನದ ಉತ್ಸಾಹ ಅಷ್ಟಾಗಿ ಕಂಡುಬರಲಿಲ್ಲ. 10 ಗಂಟೆ ವೇಳೆಗೆ ಪದವೀಧರ ಕ್ಷೇತ್ರದಲ್ಲಿ ಶೇ.14.92 ಮತದಾನ ಆಗಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ ಶೇ 14.35 ಮತದಾನವಾಗಿತ್ತು. 11 ಗಂಟೆ ಬಳಿಕ ಕ್ರಮೇಣ ಮತದಾನ ಚುರುಕುಗೊಂಡಿತು. ಮಂಗಳೂರಿನ ವಿವಿ ಕಾಲೇಜು ಮತಗಟ್ಟೆಯಲ್ಲಿ ಉದ್ದದ ಸರತಿ ಸಾಲು ಕಂಡುಬಂತು. ಮೂಡುಬಿದಿರೆ, ಮೂಲ್ಕಿಯ ಮತಗಟ್ಟೆಗಳಲ್ಲೂ ಉತ್ತಮ ಸಂಖ್ಯೆಯ ಮತದಾರರಿದ್ದರು. ಜೂ.6ರಂದು ಮೈಸೂರಿನಲ್ಲಿ ಮತಎಣಿಕೆ ನಡೆಯಲಿದೆ.
ಮಳೆ ಅಡ್ಡಿ...:
ಮತದಾನಕ್ಕೆ ಮಳೆ ಕೊಂಚ ಅಡ್ಡಿಯಾಯಿತು. ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮಳೆಯಿಂದಾಗಿ ಮತದಾನಕ್ಕೆ ಬಂದವರು ಪರದಾಡುವಂತಾಯಿತು. ಇಲ್ಲಿ ವಾಹನ ನಿಲುಗಡೆಗೂ ಸರಿಯಾದ ವ್ಯವಸ್ಥೆ ಇರಲಿಲ್ಲ.










