Mangalore: ಸೋಲಿನ ಅಂತರ ಕಡಿಮೆಯಾಗಿದೆ, ಮೋದಿಗೆ ಪಾಠ ಕಲಿಸಲಾಗಿದೆ: ದಿನೇಶ್ ಗುಂಡೂರಾವ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯ ಸೋಲಿನ ಅಂತರ ಕಡಿಮೆ ಆಗಿದೆ. ಅದು ಉತ್ತಮ ಬೆಳವಣಿಗೆ. ಕರಾವಳಿಯ ಪರಿಸ್ಥಿತಿ ಅರಿವಿದೆ. ನಮ್ಮ ಪ್ರಯತ್ನ ಮುಂದೆ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು. ನಮ್ಮ ಕೆಲಸ, ಕಾರ್ಯಕ್ರಮಗಳ ಮೂಲಕ ಜನರ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲಿ ನಾಯಕರು, ಕಾರ್ಯಕರ್ತರು ಒಳ್ಳೆಯ ಪ್ರಯತ್ನ ಮಾಡಲಾಗಿದೆ ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಲಿತಾಂಶದಲ್ಲಿ ಸೋತಾಗ ಎಲ್ಲವನ್ನೂ ಕಳೆದುಕೊಂಡಂತೆ, ಗೆದ್ದಾಗ ಎಲ್ಲವನ್ನೂ ಗೆದ್ದಂತೆ ಭಾವಿಸಬಾರದು ಎಂಬಂತೆ ಕೇಂದ್ರದಲ್ಲಿ ಮೋದಿಯವರಿಗೆ ಪಾಠ ಕಲಿಸಲಾಗಿದೆ. ಸರ್ವಾಧಿಕಾರಿಯಾಗುವ ಅವರ ಧೋರಣೆಗೆ ಕಡಿವಾಣ ಬಿದ್ದಿದೆ. ಪ್ರಜಾಪ್ರಭುತ್ವ ಉಳಿಸುವ ಫಲಿತಾಂಶವನ್ನು ದೇಶ ನೀಡಿದೆ ಎಂದರು.
ಎಲ್ಲರನ್ನೂ ಧಿಕ್ಕರಿಸಿ, ನಾನೇ ಭಗವಂತ ಎಂದುಕೊಂಡಿದ್ದ ಪ್ರಧಾನಿ ಮೋದಿಯವರು ಈಗ ಸಾಮಾನ್ಯ ಮನುಷ್ಯರಾಗಿದ್ದಾರೆ. ಈಗ ಎಲ್ಲರೆದುರು ತಗ್ಗಿಬಗ್ಗಿ ಹೋಗುವ ಪರಿಸ್ಥಿತಿ ಎದುರಾಗಿದೆ. ದೇಶ ಹಾಗೂ ವ್ಯವಸ್ಥೆಗೆ ಒಳ್ಳೆಯದಾಗಿದೆ. ಕಾಂಗ್ರೆಸ್ ನಿರ್ನಾಮ ಮಾಡುವುದಾಗಿ ಹೇಳಿದ ಬಿಜೆಪಿ, ರಾಹುಲ್ ವಿರುದ್ಧ ಕೆಟ್ಟದಾಗಿ ವರ್ತಿಸಿತ್ತು. ಎಲ್ಲಾ ಮಾಧ್ಯಮದವರೂ ಬಿಜೆಪಿಯ ವಕ್ತಾರರಾಗಿದ್ದರು. ಮಾಧ್ಯಮ ಸಂದರ್ಶನದಲ್ಲಿ ಯಾವ ರೀತಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು ಎಲ್ಲವನ್ನೂ ನೋಡಿದ್ದೇವೆ. ಕಾಂಗ್ರೆಸ್ ಎಲ್ಲವನ್ನೂ ಎದುರಿಸಿ ಮುಂದೆ ಬಂದಿದ್ದು, ದೇಶದಲ್ಲಿ ಕಾಂಗ್ರೆಸ್ ನೆಲೆನಿಂತಿದೆ. ಉತ್ತಮ ವಿಪಕ್ಷವಾಗಿ ನಾವು ಕೆಲಸ ಮಾಡಲಿದ್ದೇವೆ. ಸಾಮಾನ್ಯ ಜನರ ಧ್ವನಿಯಾಗಿ ನಾವು ಇರುತ್ತೇವೆ ಎಂದರು.
ರಾಜ್ಯದಲ್ಲಿ ಸಚಿವರ ಕ್ಷೇತ್ರದಲ್ಲಿ ಉತ್ತಮ ನಿರ್ವಹಣೆ ಆಗದಿರುವಲ್ಲಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ವಿಶ್ಲೇಷಣೆ ಆಗಿಯೇ ಆಗುತ್ತದೆ. ಪಕ್ಷದಿಂದ ಹಿತದೃಷ್ಟಿಯಿಂದ ಯಾವ ಬದಲಾವಣೆ ಆಗಬೇಕೋ ಅದನ್ನು ವರಿಷ್ಟರು ಮಾಡಲಿದ್ದಾರೆ. ನಾವು ಅದಕ್ಕೆ ತಯಾರಾಗಿದ್ದೇವೆ. ಎಲ್ಲರೂ ಮುಖ್ಯವಾಗಿದ್ದರೂ, ಇಲ್ಲಿ ಯಾರೂ ಅನಿವಾರ್ಯ ಅಲ್ಲ. ಪಕ್ಷ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದಲ್ಲಿ ಅಗತ್ಯ ಬದಲಾವಣೆಯನ್ನು ವರಿಷ್ಟರು ಮಾಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಗೃಹ ಸಚಿವರ ಆದೇಶದ ಮೇರೆಗೆ ರಚನೆಯಾದ ಆಂಟಿ ಕಮ್ಯುನಲ್ ವಿಂಗ್ ಯಾವ ಹಂತದಲ್ಲಿ ಎಂಬಹ ಮಾಹಿತಿ ಇಲ್ಲ. ಮೂರು ತಿಂಗಳು ಚುನಾವಣೆಯಲ್ಲಿ ನಿರತವಾಗಿದ್ದು, ಮುಂದೆ ಈ ಬಗ್ಗೆ ಗಮನ ಹರಿಸಲಾಗುವುದು. ಸಾಮರಸ್ಯ ಕಾಪಾಡುವುದು ನಮ್ಮ ಜವಾಬ್ಧಾರಿ. ಯಾವುದೇ ಪ್ರಚೋದನ ಕಾರಿ ಶಕ್ತಿಗಳಿದ್ದರೆ, ಯಾವುದೇ ಧರ್ಮ, ಜಾತಿ, ಭಾಷೆಯವರಾಗಿದ್ದರೂ ಅಂತಹರ ವಿರುದ್ಧ ಕ್ರಮ ಆಗಬೇಕು ಎಂದರು.