
Mangalore: ಮಂಗಳೂರು ವಿ.ವಿ.-ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ
ಮಂಗಳೂರು: ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಪದವಿ ಕೋರ್ಸ್‌ಗಳ 2024-25 ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ ನೆಡೆಯುತ್ತಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.
ಮಂಗಳಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಬುಧವಾರ ಮಂಗಳೂರು ವಿವಿಯ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಂಗಳೂರು ವಿ.ವಿ.ಯ ಎರಡನೇ, ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್‌ನ ಪರೀಕ್ಷೆಗಳು ಜೂ.24ರಿಂದ ಆರಂಭ ವಾಗಲಿದ್ದು, ಜು.31ರ ವರೆಗೆ ನಡೆಯಲಿದೆ. ಇದರಲ್ಲಿ ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಮೊದಲು ಪರೀಕ್ಷೆ ನಡೆಸಿ ಕೊಂಡು ಮೌಲ್ಯಮಾಪನವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಕೊರೋನಾ ನಂತರ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಯಾಗಿತ್ತು ಎಂದು ಕುಲಪತಿ ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ 150 ಕಾಲೇಜುಗಳು ಸಂಯೋಜನೆಗೆ ಅರ್ಜಿ ಸಲ್ಲಿಸಿದ್ದು, ಉಳಿದಂತೆ 17 ಕಾಲೇಜುಗಳು 2024-25ನೇ ಸಾಲಿನಲ್ಲಿ ಪ್ರವೇಶಾತಿಗಾಗಿ ವಿಶ್ವ ವಿದ್ಯಾನಿಲಯದ ಸಂಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಮಂಗಳೂರು ವಿವಿಯಡಿಯಲ್ಲಿ 178 ಒಟ್ಟು ಕಾಲೇಜುಗಳಿದ್ದು, ಇದರಲ್ಲಿ 7 ಸ್ವಾಯತ್ತ ಕಾಲೇಜುಗಳು, 5 ವಿಶ್ವ ವಿದ್ಯಾನಿಲಯದ ಸಂಯೋಜಿತ ಕಾಲೇಜುಗಳು ಸೇರಿವೆ. ಉಳಿದಂತೆ 17 ಕಾಲೇಜುಗಳು ಈ ಬಾರಿ ಪ್ರಥಮ ವರ್ಷದ ಸಂಯೋಜನೆಗೆ ಮುಂದಾಗಿಲ್ಲ, ಆದರೆ ಎರಡನೇ ಹಾಗೂ ಮೂರನೇ ವರ್ಷದ ಪದವಿ ತರಗತಿಗಳು ಇಲ್ಲಿ ಯಥಾ ಸ್ಥಿತಿಯಲ್ಲಿ ಸಾಗಲಿದೆ. ಮುಂದುವರಿಕೆ ಸಂಯೋಜ ನೆಯಲ್ಲಿ ಈ ಬಾರಿ 136 ಕಾಲೇಜುಗಳು, ವಿಸ್ತರಣಾ ಸಂಯೋಜನೆಯಲ್ಲಿ 36, ಶಾಶ್ವತ ಸಂಯೋಜನೆಯಲ್ಲಿ 29 ಕಾಲೇಜುಗಳು ಹಾಗೂ ಹೊಸ ಶಾಶ್ವತ ಸಂಯೋಜನೆಯಲ್ಲಿ 5 ಕಾಲೇಜುಗಳು ಅರ್ಜು ಸಲ್ಲಿಸಿದ್ದು ಅನುಮೋದನೆಯನ್ನು ನೀಡಲಾಗಿದೆ ಎಂದರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ನೀಡಲು ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜೊತೆಗೆ 2024-25ನೇ ಸಾಲಿಗೆ ಶೈಕ್ಷಣಿಕ ಮಂಡಳಿ ಸಮಿತಿಯನ್ನು ರಚಿಸುವುದು, ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮಗಳಿಗೆ ಸಂಬಂಧಿಸಿದ ವರದಿ, ನಂತೂರಿನ ಶ್ರೀಭಾರತಿ ಕಾಲೇಜಿನ ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸ ಸಂಯೋಜನೆ ಯಾದ ಬಿಕಾಂ( ಬ್ಯುಸಿನೆಸ್ ಡಾಟಾ ಅನಾಲಿಟಿಕ್ಸ್)ಗೆ ಮಂಜೂರಾತಿಯನ್ನು ನೀಡಲಾಯಿತು.
ವಾಣಿಜ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರವೇಶಾತಿಗೆ ತಿದ್ದುಪಡಿ ಅನುಮೋದನೆ ನೀಡಲಾಗಿದ್ದು, ಮಂಗಳೂರು ವಿವಿಯ ಸ್ವಾಯತ್ತ ಕಾಲೇಜಾದ ಶ್ರೀಮಂಜುನಾಥೇಶ್ವರ ಕಾಲೇಜಿನಲ್ಲಿ ಬಿ.ವೋಕ್ ಮಾಡಿದವರಿಗೆ ಎಂಕಾಂ ಪ್ರವೇಶಾತಿಯಲ್ಲಿ ಈ ಕೋರ್ಸ್ ಮಾಡಿದವರಿಗೆ ಅದ್ಯತೆ ನೀಡಲು ಅನುಮೋದನೆ ನೀಡಲಾಯಿತು. ಎಸ್ಸಿಎಸ್ ಪ್ರಥಮ ದರ್ಜೆ ಕಾಲೇಜು, ತ್ರಿಶಾ ಕಾಲೇಜು ಮ್ಯಾನೇಜ್ಮೆಂಟ್ ಮತ್ತು ಸಂಧ್ಯಾ ಕಾಲೇಜುಗಳ ಸ್ಥಳ ಬದಲಾವಣೆಗೆ ಅನುಮೋದನೆ ನೀಡಲಾಯಿತು.
ಕುಲಸಚಿವ (ಆಡಳಿತ)ಕೆ. ರಾಜು ಮೊಗವೀರ), ಕುಲಸಚಿವ (ಪರೀಕ್ಷಾಂಗ) ಡಾ.ಎಚ್. ದೇವೇಂದ್ರಪ್ಪ, ಹಣಕಾಸು, ಅಧಿಕಾರಿ ಡಾ. ಸಂಗಪ್ಪ ವೈ ಉಪಸ್ಥಿತರಿದ್ದರು.