
Mangalore: ರಂಗರಾವ್ ಆರಂಭಿಸಿರುವ ಶಾಲೆ, ತೆರೆದಿರುವ ಹಾಸ್ಟೆಲ್‌ಗಳು ಸರಕಾರಕ್ಕೂ ಮಾದರಿ: ಕಾಮತ್
ಮಂಗಳೂರು: ಪ.ಜಾತಿ, ಪ.ಪಂಗಡದವರನ್ನು ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ರಂಗರಾವ್ ಆರಂಭಿಸಿರುವ ಶಾಲೆ, ತೆರೆದಿರುವ ಹಾಸ್ಟೆಲ್‌ಗಳು ಸರಕಾರಕ್ಕೂ ಮಾದರಿಯಾಗಿದೆ. ರವೀಂದ್ರನಾಥ ಠಾಗೋರ್ ಕೂಡ ರಂಗರಾವ್ರ ಸಾಧನೆಯನ್ನು ಪ್ರಶಂಶಿಸಿದ್ದರು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ಅವರು ಜೂ.29 ರಂದು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ಶನಿವಾರ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕುದ್ಮುಲ್ ರಂಗರಾವ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿನಗರ ವಿಕಾಸ ಯೋಜನೆಯಲ್ಲಿ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳವನ್ನು 3 ಕೋ.ರೂ. ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ಅವರ ಸಾಧನೆ, ಜೀವನ ಸಂದೇಶವನ್ನು ಸಂಗ್ರಹಾಲಯ ಮಾದರಿಯಲ್ಲಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ತಾಂತ್ರಿಕ ಕಾರಣದಿಂದ ಯೋಜನೆಯ ಅನುಷ್ಠಾನಕ್ಕೆ ತಡೆಯಾಗಿದೆ. 2028ರ ವೇಳೆ ರಂಗರಾವ್ ಅಗಲಿ 100 ವರ್ಷ ತುಂಬಲಿದ್ದು, ಅದಕ್ಕೂ ಮುನ್ನ ಈ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಮಾತನಾಡಿ, ರಂಗರಾವ್ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಶಾಲೆ, ಐಟಿಐ, ಹಾಸ್ಟೆಲ್‌ಗಳನ್ನು ತೆರೆದು ಬ್ರಿಟಿಷರನ್ನು ಎದುರಿಸಿ ತಳವರ್ಗಕ್ಕೆ ನ್ಯಾಯ ಕೊಡಿಸಲು ಹೋರಾಡಿದ್ದರು. ಇಂದು ಆ ಸಮಾಜಕ್ಕೆ ನ್ಯಾಯ ಸಿಕ್ಕಿದ್ದಿದ್ದರೆ ಅದಕ್ಕೆ ಮೂಲ ಕಾರಣವೇ ಕುದ್ಮುಲ್ ರಂಗರಾವ್ ಅವರಾಗಿದ್ದಾರೆ ಎಂದು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾರಾಯಣ ಗುರು ಕಾಲೇಜಿನ ಪ್ರಾಧ್ಯಾಪಕ ಕೇಶವ ಬಂಗೇರ ಉಪನ್ಯಾಸ ನೀಡಿದರು.
ಉಪ ಮೇಯರ್ ಸುನೀತಾ, ಪಾಲಿಕೆಯ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ದಿವಾಕರ ಪಾಂಡೇಶ್ವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್., ಉಪಾಯುಕ್ತರಾದ ರವಿ ಕುಮಾರ್, ಗಿರೀಶ್ ನಂದನ್ ಹಾಗೂ ವಿವಿಧ ವಾರ್ಡ್ಗಳ ಮನಪಾ ಸದಸ್ಯರು ಉಪಸ್ಥಿತರಿದ್ದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪಾಲಿಕೆಯ ಸಮುದಾಯ ಅಧಿಕಾರಿ ಮಾಲಿನಿ ರಾಡ್ರಿಗಸ್ ಸ್ವಾಗತಿಸಿದರು.