
Mangalore: ಓಲೈಕೆ ನೀತಿ, ಮತ ಬ್ಯಾಂಕ್ ರಾಜಕಾರಣದಿಂದ ದೇಶದ ಭದ್ರತೆ ಅಪಾಯಕಾರಿಯಾಗಿದೆ: ಸಿ.ಟಿ. ರವಿ
ಮಂಗಳೂರು: ಸರ್ಕಾರದ ಮತ ಬ್ಯಾಂಕ್ ಮತ್ತು ಓಲೈಕೆ ನೀತಿಗಳೇ ದೇಶದ ಭದ್ರತೆ ಅಪಾಯಕಾರಿಯಾಗಿದೆ. ಲವ್ ಜಿಹಾದ್ ಮತ್ತು ವೋಟ್ ಜಿಹಾದ್‌ಗಳು ಭಾರತದ ಸನಾತನ ಧರ್ಮ, ಭಾರತೀಯತೆ ಮತ್ತು ಸಂವಿಧಾನದ ಆಶಯವನ್ನು ಮುಗಿಸುವ ಸಂಚು ನಡೆಸುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಟಿ. ರವಿ ಆರೋಪಿಸಿದ್ದಾರೆ.
ಬೋಳಿಯಾರ್‌ಲ್ಲಿ ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ ಬಳಿಕ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ನೀತಿ ಸಂವಿಧಾನವನ್ನು ಉಳಿಸುವುದಿಲ್ಲ. ರಸ್ತೆಯಲ್ಲೇ ನಮಾಜ್ ಮಾಡಿದವರ ಕೇಸ್ ವಾಪಸ್ ಪಡೆಯುವುದು, ಅದನ್ನು ಪ್ರಶ್ನಿಸಿದವರ ಮೇಲೆ ಕೇಸ್ ಹಾಕುವ ಮೂಲಕ ಜಾತೀಯತೆ, ಭಯೋತ್ಪಾದಕತೆಯ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದು ಮತಾಂಧರ ಪರವಾಗಿ ಸರ್ಕಾರ ಇರುವುದನ್ನು ತೋರಿಸುತ್ತದೆ, ಅಲ್ಲದೆ ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುವ ಹುನ್ನಾರ ಅಡಗಿದೆ. ಮತಾಂಧರು, ದೇಶದ್ರೋಹಿಗಳ ಬಗ್ಗೆ ಸರ್ಕಾರ ಮೃದು ಧೋರಣೆ ಹೊಂದಿರುವುದನ್ನು ಇದು ಸೂಚಿಸುತ್ತದೆ ಎಂದು ಆರೋಪಿಸಿದರು. ಈ ಘಟನೆಗೆ ಸಂಬಂಧಿಸಿ ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಸ್ಲಿಮರಿಗೆ ಶೇ.4 ಮೀಸಲಾತಿಗೆ ಬಿಜೆಪಿ ಕರ್ನಾಟಕದಲ್ಲಿ ವಿರೋಧಿಸಿದರೂ ಆಂಧ್ರದಲ್ಲಿ ಮಿತ್ರ ಪಕ್ಷ ಬೆಂಬಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ಆಧಾರಿತ ಮೀಸಲಾತಿಗೆ ಬಿಜೆಪಿಯ ವಿರೋಧ ಇದೆ. ಪ್ರಸಕ್ತ ಜಾತಿ ಆಧಾರಿತ ಮೀಸಲಾತಿ ಜಾರಿ ವಿಚಾರ ಕೋರ್ಡ್‌ನಲ್ಲಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮೀಸಲಾತಿ ನೀಡಲು ಅವಕಾಶ ಇರುವಾಗ ಜಾತಿ ಆಧಾರಿತ ಮೀಸಲಾತಿಯ ಅಗತ್ಯವೇ ಇಲ್ಲ. ಇದು ಅಂಬೇಡ್ಕರ್‌ರ ಚಿಂತನೆಯೂ ಅಲ್ಲ, ಸಂವಿಧಾನ ವಿರೋಧಿಯೂ ಹೌದು ಎಂದರು.
ಮಂಗಳೂರು ಹೊರವಲಯದ ಬೋಳಿಯಾರ್ನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರು ‘ಭಾರತ್ ಮಾತಾಕೀ ಜೈ’ ಎಂದಾಗ ಅಲ್ಲಿನ ಮಸೀದಿ ಎರಡೂ ಕಡೆ ಸೇರಿದವರು ‘ಚೆಡ್ಡಿಗಳೇ ತೊಲಗಿ’ ಎಂದು ಘೋಷಣೆ ಕೂಗಿ ಅಟ್ಟಿಸಿಕೊಂಡು ಬಂದು ಗಂಭೀರ ಹಲ್ಲೆ ಮಾಡಿದ್ದಾರೆ. ಎಲ್ಲಿಯೂ ‘ಪಾಕಿಸ್ತಾನದ ಕುನ್ನಿಗಳೇ’ ಎಂದು ಹೇಳಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೂ ಇಲ್ಲಿನವರು ಯಾಕೆ ಪ್ರಚೋದನೆಗೆ ಒಳಗಾಗಬೇಕು? ಅಂತಹ ಪಾಕ್ ಪ್ರೇಮಿಗಳಿದ್ದರೆ ಸ್ಥಳೀಯ ಶಾಸಕರ ಸಾಮ್ರಾಜ್ಯದಲ್ಲಿ ಪಾಕ್ ಪರರಿದ್ದಾರೆ ಎಂಬುದು ಸಾಬೀತಾದಂತಾಗುತ್ತದೆ. ಹೀಗಂದರೆ ಭಾರತ ಮಾತೆಯ ಮಕ್ಕಳಿಗೆ ಬೇಸರವಾಗದು, ಪಾಕ್ಗೆ ಹುಟ್ಟಿದವರಿಗೆ ಬೇಸರ ಆಗಬಹುದು. ಅಂತಹವರನ್ನು ಪಾಕ್ಗೆ ಕಳುಹಿಸಬೇಕು, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ವಿಚಾರದಲ್ಲಿ ಬೋಳಿಯಾರ್‌ಗೆ ಹೊರಗಿನವರು ಪ್ರವೇಶಿಸುವ ಅಗತ್ಯ ಇಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ಹಾಗಾದರೆ ಅವರೇ ಪಾಕ್ ಪರ ಇರುವವರನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ಎಂದು ಕುಟುಕಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಆರ್‌ಎಸ್‌ಎಸ್ ಮುಖಂಡರ ಹೇಳಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆಯಾಗಿದ್ದು, ಅದರ ಪ್ರಮುಖರು ಏನೇ ಹೇಳಿದರೂ ಅದು ಬಿಜೆಪಿಯ ಒಳ್ಳೆಯದ್ದೇ ಇರುತ್ತದೆ. ಪ್ರಧಾನಿ ಕೂಡ ನಾನು ದೇಶದ ಜನತೆಯ ಸೇವಕ ಎಂದಿದ್ದಾರೆ, ಹಾಗಿರುವಾಗ ಯಾರೋ ಅಹಂಕರಾದಿಂದ ವರ್ತಿಸಿದ್ದರೆ, ಅವರು ತಿದ್ದಿಕೊಳ್ಳಬಹುದು ಎಂದ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದರು.
ಪಾಕ್ ಕುನ್ನಿಗಳೇ ಎಂದು ಹೇಳಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಹೇಳುತ್ತಿರುವ ಪೊಲೀಸ್ ಕಮಿಷನರ್ ಅವರು ಯಾಕೆ ಹಲ್ಲೆ ನಡೆಸಿದವರನ್ನು ಮರು ಪ್ರಶ್ನಿಸಿಲ್ಲ. ಪಾಕ್ ಕುನ್ನಿಗಳೇ ಎಂದು ಹೇಳಿದರೆ ಏನು ತಪ್ಪು ಎಂದು ಪ್ರಶ್ನಿಸಬೇಕಿತ್ತು. ಅವರೇನು ಪಾಕ್ ಕಮಿಷನರೇ ಅಥವಾ ಭಾರತದ ಪೊಲೀಸ್ ಕಮಿಷನರಾ? ಪೊಲೀಸ್ ಕಮಿಷನರ್ ಮತೀಯ ಶಕ್ತಿಗಳ, ರಾಜಕೀಯ ಕೈಗೊಂಬೆಯಂತೆ ವರ್ತಿಸಬಾರದು. ಸ್ಥಳೀಯ ಮಸೀದಿಯ ಸಿಸಿ ಕ್ಯಾಮರಾ ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಮಾಯಕ ಬಿಜೆಪಿ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಪ್ರತಾಪ್ಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ನಿತಿನ್ ಕುಮಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಜಗದೀಶ್ ಶೇಣವ, ನಂದನ್ ಮಲ್ಯ, ಪ್ರೇಮಾನಂದ ಶೆಟ್ಟಿ, ವಸಂತ ಪೂಜಾರಿ ಉಪಸ್ಥಿತರಿದ್ದರು.