Mangalore: ದ.ಕ. ಜಿಲ್ಲೆಯಲ್ಲಿ ಮಳೆ ಪ್ರಾರಂಭ-ಬಿರುಸಿನ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಮಳೆ ಅಬ್ಬರಿಸಿದೆ. ಮಳೆಗೆ ಮಂಗಳೂರು ನಗರದ ಕೊಟ್ಟಾರ ಸಮೀಪ ರಾಷ್ಟ್ರೀಯ ಹೆದ್ದಾರಿ ಹಾಗೂ ಆಸುಪಾಸಿನ ಇತರ ರಸ್ತೆಗಳು ಜಲಾವೃತವಾಗಿವೆ.
ಪ್ರಾಕೃತಿಕ ವಿಪತ್ತು ನಿರ್ವಹಣಾ ಜಿಲ್ಲಾ ಸಮಿತಿ, ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೃತಕ ನೆರೆ ನಿರ್ವಹಣೆ ಕಾಮಗಾರಿ ನಡೆಯುತ್ತಿದ್ದರೂ, ಕೃತಕ ನೆರೆ ಭೀತಿ ದೂರವಾಗಿಲ್ಲ.
ಗೋರಿಗುಡ್ಡ-ವೆಲೆನ್ಸಿಯಾ ನಡುವೆ ಸುಮಾರು ಒಂದು ಕಿ.ಮೀ. ರಸ್ತೆಯ ಒಂದು ಬದಿ ಅಗೆಯಲಾಗಿದ್ದು, ಈ ಭಾಗದಲ್ಲಿ ಜನರು, ಶಾಲಾ ಮಕ್ಕಳು ಭಯದಿಂದ ಸಂಚರಿಸುವ ಪರಿಸ್ಥಿತಿ ಇದೆ.
ಮಳೆಗಾಲದಲ್ಲಿ ರಸ್ತೆ ಅಗೆಯಬಾರದು ಎಂದು ಪಾಲಿಕೆ ಎಚ್ಚರಿಕೆ ನೀಡುತ್ತಿದ್ದರೂ ನಗರದ ಹಲವೆಡೆ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವುದು ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ ಜೂ. 8ರಿಂದ 11ರ ವರೆಗೆ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಜೂ. 2ರಂದು ಮುಂಗಾರು ಆಗಮಿಸಿತ್ತಾದರೂ ಬಳಿಕದ ದಿನಗಳಲ್ಲಿ ಭಾರೀ ಮಳೆ ಸುರಿಯಲಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.