Mangalore: ಮೂರನೇ ಬಾರಿಗೆ ಮೋದಿ ಪ್ರಮಾಣವಚನ ಸ್ವೀಕಾರ-ಸಂಭ್ರಮಾಚರಣೆ
Sunday, June 9, 2024
ಮಂಗಳೂರು: ರಾಷ್ಟ್ರಪತಿ ಭವನದಲ್ಲಿ ಭಾನುವಾರ ರಾತ್ರಿ 7.15ರ ಸುಮಾರಿಗೆ ಸತತ ಮೂರನೇ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕರಾವಳಿಯಲ್ಲೂ ಬಿಜೆಪಿ ಸಂಭ್ರಮ ಮುಗಿಲು ಮುಟ್ಟಿತ್ತು. ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಜೈ ಜೈ ಮೋದೀಜಿ ಜಯಕಾರ ಮುಗಿಲುಮುಟ್ಟಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗವೂ ಸಂಭ್ರಮ ಮನೆ ಮಾಡಿತ್ತು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಶಕಿಲಾ ಕಾವಾ, ಪೂಜಾ ಪೈ, ರಮೇಶ್ ಕಂಡೆಟ್ಟುಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮೋದಿಗಾಗಿ ಪ್ರಾರ್ಥನೆ:
ಸತತ ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ದಾಖಲೆ ನಿರ್ಮಿಸಿದ ನರೇಂದ್ರಮೋದಿಯವರಿಗೆ ಭಗವಂತನ ಶ್ರೀ ರಕ್ಷೆ ಸದಾ ಇರಲಿ, ಅವರ ಅವಧಿಯಲ್ಲಿ ದೇಶ ಇನ್ನಷ್ಟು ಪ್ರಗತಿಯತ್ತ ಸಾಗಲಿ ಎಂದು ಕರಾವಳಿಯ ಬಹುತೇಕ ದೇವಸ್ಥಾನಗಳಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಪೂಜೆ ನೆರವೇರಿತು. ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಪ್ರಧಾನಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
