Mangalore: ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ರೋಗಿಗೆ ಚಿಕಿತ್ಸೆ ನೀಡಿ: ಡಾ. ಕೇಶವರಾಜ್ ಬಿ.

Mangalore: ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ರೋಗಿಗೆ ಚಿಕಿತ್ಸೆ ನೀಡಿ: ಡಾ. ಕೇಶವರಾಜ್ ಬಿ.


ಮಂಗಳೂರು: ಯೋಗ ಒಂದು ರೀತಿಯ ವೈದ್ಯಕೀಯ ಪದ್ಧತಿ. ಶಾರೀರಿಕ ಮತ್ತು ಮಾನಸಿಕ ಸ್ಥಿತಿಯನ್ನು ಸಮತ್ವದಲ್ಲಿರಿಸಿಕೊಳ್ಳಲು ಸಹಕಾರಿಯಾಗುತ್ತದೆ. ರೋಗಕ್ಕೆ ಚಿಕಿತ್ಸೆ ಮಾಡುವುದರ ಬದಲು ರೋಗದ ಮೂಲಕ್ಕೆ ಚಿಕಿತ್ಸೆ ಮಾಡಬೇಕು. ಈ ರೀತಿಯ ಪದ್ಧತಿ ಯೋಗದಲ್ಲಿದೆ ಎಂದು ವೇದಮಯು ಮಲ್ಟಿ-ಸ್ಪೆಷಲಿಟಿ ಆಸ್ಪತ್ರೆ ನಿರ್ದೇಶಕ ಡಾ. ಕೇಶವರಾಜ್ ಬಿ. ಹೇಳಿದರು. 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗ, ಕ್ರೀಡಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಯೋಗದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಯೋಗ ಕೇವಲ ಆಸನ ಮಾಡುವುದಕ್ಕೆ ಸೀಮಿತವಾಗಬಾರದು. ಶೌಚ, ಸತ್ಯ, ಅಹಿಂಸೆ, ಯಮ, ನಿಯಮಾದಿಗಳನ್ನು ಅನುಸರಿಸಿದಾಗ ಮಾತ್ರ ನಮ್ಮ ಸಮಾಜದಲ್ಲಿ ಮೌಲ್ಯಯುತ ನೈತಿಕ ಬದುಕನ್ನು ಜೀವಿಸುವುದಕ್ಕೆ ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರೋಪ್ ಯೋಗ, ಪೈಪ್ ಯೋಗ ಮೊದಲಾದ ಅವೈಜ್ಞಾನಿಕ ಪದ್ಧತಿಗಳು ಮುನ್ನಲೆಗೆ ಬಂದಿವೆ. ಯೋಗ ತನ್ನ ಚೌಕಟ್ಟಿನಲ್ಲಿಯೇ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು. 

ಸ್ನಾತಕೋತ್ತರ ಯೋಗವಿಜ್ಞಾನ ವಿಭಾಗದ ಸಂಯೋಜಕ ಡಾ. ಕೇಶವಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿ, ರಾಮಾಯಣ, ಮಹಾಭಾರತದ ಕಾಲದಿಂದಲೂ ಯೋಗ ಪದ್ಧತಿ ಇದೆ. ಯೋಗ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ವಿಷಯ. ಅದನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿಡಲು ಯೋಗ ಉಪಯೋಗಕ್ಕೆ ಬರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮಾನಸಿಕ ಒತ್ತಡದಲ್ಲಿದ್ದಾರೆ. ಒತ್ತಡವನ್ನು ಮೆಟ್ಟಿ ನಿಲ್ಲಬೇಕಾದರೆ ಯೋಗದ ಅಗತ್ಯತೆ ತುಂಬಾ ಇದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ಡಾ. ರಂಗಪ್ಪ, ಡಾ. ಅಜಿತೇಶ್, ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article