Mangalore: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಸಂಪನ್ನ

Mangalore: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಸಂಪನ್ನ


ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಒಂಬತ್ತನೇ ತಿಂಗಳ ಸ್ವಚ್ಛತಾ ಅಭಿಯಾನ ಜೂ.9 ರಂದು ಬೆಳಿಗ್ಗೆ ಕೊಟ್ಟಾರಚೌಕಿಯ ಫ್ಲೈ ಓವರ್ ಪರಿಸರದಲ್ಲಿ ಚಾಲನೆ ನೀಡಲಾಯಿತು. 

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರ ಸಾನಿಧ್ಯದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ. ರುಡಾಲ್ಫ್ ನೊರೊನ್ಹಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಕಿರಣ್ ಕೋಡಿಕಲ್ ಹಸಿರು ನಿಶಾನೆ ತೋರುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಡಾ. ರುಡಾಲ್ಫ್ ನೊರೊನ್ಹಾ ಮಾತನಾಡಿ, ಪ್ರಧಾನಮಂತ್ರಿಗಳ ಸ್ವಚ್ಛ ಭಾರತದ ಕರೆಗೆ ಓಗೊಟ್ಟು, ಧನಾತ್ಮಕ ಚಿಂತನೆಯೊಂದಿಗೆ ಆರಂಭವಾದ ಕಾರ್ಯ ಇಂದು ಬೃಹತ್ ಅಭಿಯಾನವಾಗಿದೆ. ಮಂಗಳೂರು ರಾಮಕೃಷ್ಣ ಮಿಷನ್ 2015ರಲ್ಲಿ ಆರಂಭಿಸಿದ ಸ್ವಚ್ಛ ಮಂಗಳೂರು ಅಭಿಯಾನ ಇಂದಿಗೂ ಹಲವಾರು ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ. ಇಲ್ಲಿ ನೆರೆದಿರುವ ಯುವಕರಿಗೆ ಈ ಸ್ವಚ್ಛತಾ ಕಾರ್ಯವು ಪ್ರೇರಣೆ ನೀಡಲಿ ಎಂದು ಹೇಳಿದರು. 

ಈ ಪರಿಸರದಲ್ಲಿದ್ದ ಮದ್ಯದ ಬಾಟಲಿಗಳು, ತ್ಯಾಜ್ಯ, ಬಟ್ಟೆ, ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಸ್ವಯಂಸೇವಕರು ಸ್ವಚ್ಛಗೊಳಿಸಿದರು. ಮಂಗಳಾ ನಸಿಂಗ್ ಕಾಲೇಜಿನ  ಪ್ರಾಧ್ಯಾಪಕರಾದ ನವೀನ ಹಾಗೂ ಕೀರ್ತಿರಾಜ್ ಅವರ ನೇತೃತ್ವದಲ್ಲಿ ನಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಈ ಕಾರ್ಯದಲ್ಲಿ ಭಾಗವಹಿಸಿತು. ತಾರಾನಾಥ ಆಳ್ವ, ಅಶೋಕ್ ಸುಬ್ಬಯ್ಯ ಅವರ ನೇತೃತ್ವದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಕೇಶ್ ಹಾಗೂ ಡಾ. ಜಯೇಶ್ ಅವರ ಮಾರ್ಗದರ್ಶನದಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿಗಳ ತಂಡ ಮಳೆಯಿಂದಾಗಿ ರಸ್ತೆಯಲ್ಲಿ ಕೊಚ್ಚಿ ಬಂದಿದ್ದ ಮಣ್ಣನ್ನು ತೆರವುಗೊಳಿಸಿತು. 

ಕೊಟ್ಟಾರಚೌಕಿಯ ಫ್ಲೈ ಓವರ್ ಪಿಲ್ಲರ್‌ಗಳ ವರ್ಣಚಿತ್ರಕ್ಕೆ ಜೀವಕಳೆ:

ರಾಷ್ಟೀಯ ಹೆದ್ದಾರಿಯಿಂದ ಮಂಗಳೂರು ನಗರ ಪ್ರವೇಶ ಪಡೆಯುವ ಕೊಟ್ಟಾರ ಚೌಕಿಯಲ್ಲಿ 2019ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪದ ಅಂಗವಾಗಿ ಸಂಪೂರ್ಣ ಕೊಟ್ಟಾರ ಚೌಕಿ ಫ್ಲೈ ಓವರ್‌ನ ಕೆಳಭಾಗದ 30,000 ಚದರ ಅಡಿ ವಿಸ್ತೀರ್ಣದ ಜಾಗವನ್ನು ಅಭಿವೃದ್ಧಿಪಡಿಸಿ ಸುಂದರಿಕರಣಗೊಳಿಸಲಾಗಿತ್ತು. ಕಾಲಾನುಕ್ರಮದಲ್ಲಿ ಇಲ್ಲಿನ ಕಂಬಗಳಲ್ಲಿ ಬಿಡಿಸಲಾಗಿದ್ದ ವರ್ಣಚಿತ್ರದ ಬಣ್ಣಗಳು ಮಾಸಿಹೋಗಿತ್ತು. ಇದರ ನಿರ್ವಹಣೆಯ ಅವಶ್ಯಕತೆ ಇರುವುದನ್ನು ಮನಗಂಡ ರಾಮಕೃಷ್ಣ ಮಿಷನ್ ಸ್ವಯಂಸೇವಕರ ತಂಡವು ಈ ವರ್ಣಚಿತ್ರಗಳನ್ನು ಮರುಪೈಂಟಿಂಗ್ ಮಾಡುವ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿತು. ಈ ಕಾರ್ಯಕ್ಕೆ ಎರಡು ತಿಂಗಳ ಹಿಂದೆ ಎಂ.ಆರ್.ಪಿ.ಎಲ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಹೆಚ್.ವಿ. ಪ್ರಸಾದ್ ಚಾಲನೆ ನೀಡಿದ್ದರು. ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆದಿತತ್ವ ಆರ್ಟ್ಸ್‌ನ ವಿಕ್ರಂ ಶೆಟ್ಟಿ ನೇತೃತ್ವದ 20 ಕಲಾವಿದರ ತಂಡ, 7000 ಚದರ ಅಡಿಯ 18 ಫ್ಲೈ ಓವರ್ ಕಂಬಗಳಲ್ಲಿ ‘ವೆಕ್ಟರ್ ಚಿತ್ರ’ ಬಿಡಿಸುವ ಕಾರ್ಯವನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಿದೆ. 

ನಿವೃತ್ತ ಯೋಧ ಕ್ಯಾ. ಗಣೇಶ್ ಕಾರ್ಣಿಕ್, ಬೆಳ್ಳಾಲ ಗೋಪಿನಾಥ್ ರಾವ್, ಸಿ.ಎ ಶಿವಕುಮಾರ್, ಕಮಲಾಕ್ಷ ಪೈ, ಶೇಷಪ್ಪ ಅಮೀನ್ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು. 


ರಾಮಕೃಷ್ಣ ಮಿಷನ್ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಿಂದ ಶ್ಲಾಘನೆ:

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಸಹಕಾರದೊಂದಿಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ 7000 ಚದರ ಅಡಿಯ 18 ಪಿಲ್ಲರ್‌ಗಳಲ್ಲಿ ವರ್ಣಚಿತ್ರಗಳನ್ನು ಬಿಡಿಸುವ ಮುಖಾಂತರ ಮಂಗಳೂರು ನಗರದ ಪ್ರವೇಶ ದ್ವಾರದಂತಿರುವ ಕೊಟ್ಟಾರ ಚೌಕಿಯ ಫ್ಲೈ ಓವರ್‌ನ ಪಿಲ್ಲರ್‌ಗಳಿಗೆ ಹೊಸ ರೂಪ ನೀಡಿದ ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂಸೇವಕರ ಕಾರ್ಯವನ್ನು ದಕ್ಷಿಣಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶ್ಲಾಘಿಸಿದ್ದಾರೆ.

















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article