Mangalore: ಜೀವಂತ ವ್ಯಕ್ತಿಗೆ ಮೃತ ಎಂದು ಮಾಹಿತಿ ನೀಡಿದ ಪೊಲೀಸರು

Mangalore: ಜೀವಂತ ವ್ಯಕ್ತಿಗೆ ಮೃತ ಎಂದು ಮಾಹಿತಿ ನೀಡಿದ ಪೊಲೀಸರು

ಮಂಗಳೂರು: ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಮೃತಪಟ್ಟಿರುವುದಾಗಿ ಪೊಲೀಸರು ರೋಗಿಯ ಕುಟುಂಬಸ್ಥರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶೇಖರ ಗೌಡ (55) ಜೂ.15ರಂದು ತೀವ್ರ ಅನಾರೋಗ್ಯದಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆದರೆ ಅವರನ್ನು ಉಪಚರಿಸಲು ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಜೂ.16ರಂದು ರೋಗಿಯ ಸಂಬಂಧಿಕರಿಗೆ ಶೇಖರ ಗೌಡ ಮೃತಪಟ್ಟಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಸಂಬಂಧಿಕರು ಮತ್ತು ಧರ್ಮಸ್ಥಳ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ತೆರಳಿ ನೋಡಿದಾಗ ಶೇಖರ ಗೌಡ ಜೀವಂತವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ತಪ್ಪಾಗಿಲ್ಲ..:

ಶೇಖರ ಗೌಡ ಜೂ.15ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆ ವೇಳೆ ಅವರೊಂದಿಗೆ ವಾರಸುದಾರರು ಯಾರೂ ಇರಲಿಲ್ಲ. ಹಾಗಾಗಿ ನಿಯಮದಂತೆ ಆಸ್ಪತ್ರೆಯಿಂದ ಪಾಂಡೇಶ್ವರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ವ್ಯಕ್ತಿ ಗಂಭೀರ ಸ್ಥಿತಿಯಲ್ಲಿರುವ ಬಗ್ಗೆಯೂ ತಿಳಿಸಲಾಗಿತ್ತು. 

ಪೊಲೀಸರು ಪರಿಶೀಲನೆ ನಡೆಸಿ ಅವರ ವರದಿಯನ್ನು ಇ-ಮೇಲ್ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಅಲ್ಲಿಂದ ಧರ್ಮಸ್ಥಳ ಠಾಣೆಗೆ ವರದಿ ಹೋಗಿತ್ತು. ವರದಿಯಲ್ಲಿ ‘ಗಂಭೀರ ಸ್ಥಿತಿ’ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಆದರೆ ಇ-ಮೇಲ್ ಮಾಡುವಾಗ ಪಾಂಡೇಶ್ವರ ಪೊಲೀಸರು ಸಬ್ಜೆಕ್ಟ್ ಬರೆಯುವಲ್ಲಿ ‘ಮೃತಪಟ್ಟಿದ್ದಾರೆ’ ಎಂಬುದಾಗಿ ಟೈಪ್ ಮಾಡಿದ್ದರು. ಇ-ಮೇಲ್ ಓದಿದ ಧರ್ಮಸ್ಥಳ ಪೊಲೀಸರು ಶೇಖರ ಗೌಡ ಮೃತಪಟ್ಟಿದ್ದಾರೆಂದು ಭಾವಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ವರದಿಯ ದಾಖಲೆಗಳಲ್ಲಿ ಗಂಭೀರ/ಪ್ರಜ್ಞಾಹೀನ ಸ್ಥಿತಿ ಎಂದು ಉಲ್ಲೇಖಿಸಲಾಗಿದ್ದರೂ ಪೊಲೀಸರು ಇ-ಮೇಲ್‌ನ ಸಬ್ಜೆಕ್ಟ್ ಕಾಲಂನಲ್ಲಿ ‘ಮೃತಪಟ್ಟಿರುವರು’ ಎಂದು ತಪ್ಪಾಗಿ ಉಲ್ಲೇಖಿಸಿದ್ದೇ ಗೊಂದಲಕ್ಕೆ ಕಾರಣವಾಗಿತ್ತು ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಜೆಸಿಂತಾ ಸ್ಪಷ್ಟಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article