Mangalore: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸೂಕ್ತ ಸ್ಪಂದನೆ ಅಗತ್ಯ: ಎಸ್.ಸಿ.-ಎಸ್.ಟಿ. ಮುಖಂಡರಿಂದ ಆಗ್ರಹ

Mangalore: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸೂಕ್ತ ಸ್ಪಂದನೆ ಅಗತ್ಯ: ಎಸ್.ಸಿ.-ಎಸ್.ಟಿ. ಮುಖಂಡರಿಂದ ಆಗ್ರಹ


ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಗಣದಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಹವಾಲು ಆಲಿಕೆ ಸಭೆ ನಡೆಯಿತು.

ಸಭೆಯಲ್ಲಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ ಸಮುದಾಯದ ಮುಖಂಡರು ಮಂಗಳೂರಿನಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ನಗರದಲ್ಲೇ ಇದ್ದರೂ ಸಮುದಾಯದ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ ಎಂದುದೂರಿದರು.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದ ಎರಡೂ ಕಡೆಯ ಸಮಕ್ಷಮ ವಿಚಾರಣೆ ನಡೆಸಬೇಕು. ಅಗತ್ಯವಿದ್ದರೆ ಎಫ್‌ಐಆರ್ ದಾಖಲಿಸಬೇಕು ಎಂದು ಡಿಸಿಪಿ ದಿನೇಶ್ ಕುಮಾರ್ ಸಭೆಯಲ್ಲಿ ಸೂಚನೆ ನೀಡಿದರು.

ನಗರದಲ್ಲಿ ಮಂಗಳಮುಖಿಯರಿಂದ ಸಾರ್ವಜನಿಕರು ವಿಪರೀತ ಕಿರುಕುಳ ಅನುಭವಿಸುತ್ತಿದ್ದು, ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂತು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್, ಮಂಗಳಮುಖಿಯರು ಸಾರ್ವಜನಿಕರಿಗೆ ತೊಂದರೆ ಕೊಡದಂತೆ, ಅವರ ಜೀವನೋಪಾಯಕ್ಕಾಗಿ ಪುನರ್ವಸತಿ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದರು.

ಮಂಗಳಮುಖಿಯರಿಗೆ ವಸತಿ, ಉದ್ಯೋಗ ಸೇರಿದಂತೆ ಅವರ ಬದುಕಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ಹೀಗೆ ಮಾಡಿದರೆ ಸಾರ್ವಜನಿಕರಿಗೆ ಅವರು ತೊಂದರೆ ನೀಡುವುದು ತಪ್ಪಲಿದೆ ಎಂದು ಸಮುದಾಯದ ಮುಖಂಡರು ಒತ್ತಾಯಿಸಿದರು.

ನಾಗೇಶ್ ಕೈರಂಗಳ ಮಾತನಾಡಿ, ಪರಿಶಿಷ್ಟರ ಕಾಲನಿಗಳಲ್ಲಿ ತಿಂಗಳಿಗೊಮ್ಮೆ ಪೊಲೀಸರು ಸಭೆ ನಡೆಸಬೇಕು ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಡಿಸಿಪಿ ಸಿದ್ದಾರ್ಥ್ ಗೋಯಲ್, ಈ ಹಿಂದೆ ನಡೆಯುತ್ತಿದ್ದಂತೆ ಪ್ರತಿ ತಿಂಗಳು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಿನ್ನಿಗೋಳಿ ಪರಿಸರ ಸೇರಿದಂತೆ ಅನೇಕ ಕಡೆ ಬಿಳಿ ಬಣ್ಣ ಬಳಿಯದೆ ಹಂಪ್ಸ್ ನಿರ್ಮಿಸಿದ್ದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವಂತೆ ಅನೇಕರು ಮನವಿ ಮಾಡಿದರು. ಎಎಸ್‌ಪಿ ಜಗದೀಶ್ ಉಪಸ್ಥಿತರಿದ್ದರು. ಎಸಿಪಿ ಮನೋಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article