Mangalore: ವಿದ್ಯುತ್ ಕಂಬಗಳಿಗೆ ಹಾಕಿರುವ ಅನಧಿಕೃತ ಕೇಬಲ್ ಅಳವಡಿಕೆ: ಜಂಟಿ ಸರ್ವೆ-ಅನಧಿಕೃತ ಕೇಬಲ್ ತೆರವು: ಮೇಯರ್

Mangalore: ವಿದ್ಯುತ್ ಕಂಬಗಳಿಗೆ ಹಾಕಿರುವ ಅನಧಿಕೃತ ಕೇಬಲ್ ಅಳವಡಿಕೆ: ಜಂಟಿ ಸರ್ವೆ-ಅನಧಿಕೃತ ಕೇಬಲ್ ತೆರವು: ಮೇಯರ್


ಮಂಗಳೂರು: ಮಳೆಯ ವೇಳೆ ಅಲ್ಲಲ್ಲಿ ತಡೆಗೋಡೆಗಳ ಕುಸಿತದಿಂದ ಪ್ರಾಣ ಹಾನಿ, ವಿದ್ಯುತ್ ತಂತಿ ಹರಿದು ಅಮಾಯಕರ ಬಲಿ, ಜಲಸಿರಿ ಹಾಗೂ  ಒಳಚರಂಡಿ ಯೋಜನೆಗಾಗಿ ಅಲ್ಲಲ್ಲಿ ಅಗೆತದಿಂದ ನಗರದಲ್ಲಿ ಮಳೆಯ ಸಂದರ್ಭ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಶನಿವಾರ ನಡೆದ ಮಂಗಳೂರು ಮಹಾನಗರ  ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಮನಪಾ ಸದಸ್ಯರಿಂದ ತೀವ್ರ ಚರ್ಚೆಗೆ ಕಾರಣವಾಯಿತು.

ಮೇಯರ್ ಸುಧೀರ್ ಶೆಟ್ಟಿಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಾಕೃತಿಕ ವಿಕೋಪದಿಂದಾಗಿ ನಗರದಲ್ಲಿ ಸಂಭವಿಸಿದ ಘಟನೆಗಳನ್ನು ಪ್ರಸ್ತಾವಿಸಿದರು.

ಪಾಂಡೇಶ್ವರದ ರೊಸಾರಿಯೋ ಬಳಿ ರಿಕ್ಷಾ ಚಾಲಕರಿಬ್ಬರು ಮೆಸ್ಕಾಂನ ನಿರ್ಲಕ್ಷಯ ಹಾಗೂ ಅನಧಿಕೃತ ಕೇಬಲ್‌ಗಳಿಂದಾಗಿ ಸಾವನ್ನಪ್ಪಿದ್ದಾರೆ. ಕೊಟ್ಟಾರದಲ್ಲಿ ನೀರು  ಹರಿಯುವ ತೋಡಿಗೆ ತಡೆಗೋಡೆ ಇಲ್ಲದೆ ರಿಕ್ಷಾ ಚಾಲಕರೊಬ್ಬರು ಬಿದ್ದು ಮೃತಪಟ್ಟಿದ್ದಾರೆ. ಕಾಲುವೆಗಳಿಗೆ ತಡೆಗೋಡೆ ನಿರ್ಮಿಸಬೇಕೆಂದು ಈ ಹಿಂದೆ ಹಲವು ಬಾರಿ  ಒತ್ತಾಯ ಮಾಡಿದ್ದರೂ ಆಗಿಲ್ಲ. ಮಳೆಯ ಸಂದರ್ಭ ಮನೆಗಳಿಗೆ ಹಾನಿಯಾದಾಗ ಮಾತ್ರವೇ ಪರಿಹಾರ ಸಿಗುತ್ತದೆ. ತಡೆಗೋಡೆಗೆ ಹಾನಿಯಾದರೆ ಇಲ್ಲ. ನಗರದ 60 ವಾರ್ಡ್‌ಗಳಲ್ಲಿ ಸುಮಾರು 600 ತಡೆಗೋಡೆಗಳ ಕುಸಿತ ಆಗಿರಬಹುದು. ನೇತ್ರಾವತಿ ಜಲಾಭಿಮುಖ ಯೋಜನೆಯ ತಡೆಗೋಡೆ ಕುಸಿತ ಆಗಿದೆ ಎಂದು ಸಮಸ್ಯೆಗಳ ಸರಮಾಲೆಯನ್ನೇ ಸಭೆಯ ಮುಂದಿಟ್ಟರು.

ಸದಸ್ಯರಾದ ಮಹಮ್ಮದ್ ಲತೀಫ್, ಅಬ್ದುಲ್ ರವೂಫ್, ದಿವಾಕರ ಪಾಂಡೇಶ್ವರ, ಗಾಯತ್ರಿ, ಭಾಸ್ಕರ್, ಪ್ರೇಮಾನಂದ ಶೆಟ್ಟಿ, ವಿನಯರಾಜ್, ಶಶಿಧರ ಹೆಗ್ಡೆ  ಮೊದಲಾದವರು ಪ್ರಸ್ತಾಪಿಸಿ, ವಿದ್ಯುತ್ ಕಂಬಗಳಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಎಲ್ಲ ಕೇಬಲ್‌ಗಳನ್ನು ತೆರವುಗೊಳಿಸಿ ಭೂಗತ ಅಳವಡಿಕೆಗೆ ಅವಕಾಶ  ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮೆಸ್ಕಾಂ ಅಧಿಕಾರಿ, ಕಳೆದ ಎರಡು ವರ್ಷದಿಂದ ಹೊಸದಾಗಿ ಕೇಬಲ್ ಅಳವಡಿಕೆಗೆ ಯಾರಿಗೂ ಅನುಮತಿ ನೀಡಿಲ್ಲ. ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ನೀಡಿದರೆ ಮಾತ್ರ  ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ನೋಟಿಸ್ ನೀಡಿಯೇ ವಿದ್ಯುತ್ ಕಂಬಗಳಿಂದ ಕೇಬಲ್ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈ ಬಗ್ಗೆ ತೀವ್ರ ಚರ್ಚೆಯ ಬಳಿಕ ಮೇಯರ್ ಸುಧೀರ್ ಶೆಟ್ಟಿಯವರು, ಸ್ಮಾರ್ಚ್ ಸಿಟಿ ವತಿಯಿಂದ ಜಂಟಿ ಸರ್ವೆ ನಡೆಸುವ ವೇಳೆ ಅನಧಿಕೃತ ಕೇಬಲ್‌ಗಳನ್ನು  ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ನಗರದ ಎತ್ತರ ಹಾಗೂ ಗದ್ದೆ ಪ್ರದೇಶಗಳಲ್ಲಿ ಖಾಲಿ ಜಾಗಗಳನ್ನು ಮಣ್ಣು ತುಂಬಿಸಿ ಲೇಔಟ್ ಮಾಡುವ ಸಂದರ್ಭ ನೀರಿನ ಹರಿವಿಗೆ ಸ್ಥಳಾವಕಾಶ ಇಲ್ಲದೆ ಅನೇಕ ಕಡೆ  ತೊಂದರೆಯಾಗುತ್ತಿರುವ ಬಗ್ಗೆ ಸದಸ್ಯರನೇಕರು ಮೇಯರ್ ಗಮನ ಸೆಳೆದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಈ ಬಗ್ಗೆ ಗಮನ ಹರಿಸುತ್ತಿಲ್ಲ. ಏಕ ನಿವೇಶನಗಳಿಗೆ ಅನುಮೋದನೆ ನೀಡುವಾಗ ಪಾಲಿಕೆಯ ನಿರಕ್ಷೇಪಣಾ ಪತ್ರ  ಕಡ್ಡಾಯವಾಗಿದೆ. ಆಗಲೇ ನಿವೇಶನದ ಖಾಲಿ ಜಾಗವನ್ನು ತುಂಬಿಸುವಲ್ಲಿ ಅನುಸರಿಸಬೇಕಾದ ಕಟ್ಟುನಿಟ್ಟಿನ ವಿಧಾನಗಳ ಬಗ್ಗೆ ನಿಗಾ ವಹಿಸಬೇಕು. ಸ್ಥಳ ಪರಿಶೀಲನೆ  ವೇಳೆಯೂ ಮೂಡಾ ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಡಾ. ಭರತ್ ಶೆಟ್ಟಿಪ್ರತಿಕ್ರಿಯಿಸಿ, ಏಕ ನಿವೇಶನ ಕೊಡುವ ಸಂದರ್ಭ ಮಳೆ ನೀರು ಪ್ರಾಕೃತಿಕವಾಗಿ ಹರಿಯುವ ಬಗ್ಗೆ ಮುಡಾ ಹಾಗೂ  ಮನಪಾ ಜಂಟಿಯಾಗಿ ಗಮನ ಹರಿಸಿಯೇ ಪರವಾನಿಗೆ ನೀಡಬೇಕು. ಮನಪಾ ಮತ್ತು ಮುಡಾ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದೆ ಈ ಸಮಸ್ಯೆಯಾಗುತ್ತಿದ್ದು, ಜ ನಪ್ರತಿನಿಧಿಗಳೂ ಈ ವಿಷಯದಲ್ಲಿ ವಿಫಲವಾಗುವಂತೆ ಆಗಿದೆ ಎಂದರು.

ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಚರಂಡಿ ವ್ಯವಸ್ಥೆಯ ಬಗ್ಗೆ ಗಮನಿಸಿಯೇ ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ನೀಡಬೇಕು ಎಂದು ಮೇಯರ್ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಜಲಸಿರಿ ಯೋಜನೆ ಬಗ್ಗೆ ಪ್ರತ್ಯೇಕ ಸಭೆ

ನಗರಕ್ಕೆ 24*7 ನೀರು ಪೂರೈಕೆಯ 729 ಕೋಟಿ ರೂ.ಗಳ ಜಲಸಿರಿ ಯೋಜನೆ ಆರಂಭಗೊಂಡು ಐದು ವರ್ಷಗಳಾದರೂ ಅರ್ಧದಷ್ಟುಕಾಮಗಾರಿ ಆಗಿಲ್ಲ. ಗುತ್ತಿಗೆ ಅವಧಿ  ಪ್ರಕಾರ ಜುಲೈನಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದೆ. ಆದರೆ ಎರಡು ವಲಯಗಳ ಪೈಲೆಟ್ ಯೋಜನೆಯೇ ಕಾರ್ಯಗತಗೊಂಡಿಲ್ಲ. ಈ ಕಾಮಗಾರಿಯಿಂದಾಗಿ ಈ ಹಿಂದೆ  ಇದ್ದ ನೀರಿನ ಪೂರೈಕೆ ಜಾಲವೂ ಹಾಳಾಗಿದೆ. ಈ ಬಗ್ಗೆ ಸದನದಲ್ಲಿ ಅಧಿಕಾರಿಗಳು ಉತ್ತರಿಸಬೇಕೆಂದು ಸದಸ್ಯ ವಿನಯರಾಜ್ ಸಭೆಯಲ್ಲಿ ಪಟ್ಟು ಹಿಡಿದರು.

ಈ ಬಗ್ಗೆ ಯೋಜನೆಯ ಹಿರಿಯ ಅಧಿಕಾರಿ ಮಾಹಿತಿಯಿಂದ ತೃಪ್ತಗೊಳ್ಳದ ಸದಸ್ಯರು ಪ್ರತ್ಯೇಕ ಸಭೆಗೆ ಆಗ್ರಹಿಸಿದಾಗ, ಜಲಸಿರಿ ಯೋಜನೆಯ ಬಗ್ಗೆ ಪ್ರತ್ಯೇಕ ಸಭೆ  ನಡೆಸಲು ಮೇಯರ್ ನಿರ್ಣಯಿಸಿದರು.

ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ, ಪಾಲಿಕೆ ಆಯುಕ್ತ ಆನಂದ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article