
Mangalore: ನೀಟ್ ಪರೀಕ್ಷೆ ವ್ಯವಸ್ಥೆಯಿಂದ ಹೊರಬಂದು ಪ್ರತ್ಯೇಕ ಪರೀಕ್ಷೆ ನಡೆಸಲು ನಡವಳಿ ಸೂಚನೆ ಮಂಡಿಸುವೆ: ಐವನ್ ಡಿಸೋಜ
ಮಂಗಳೂರು: ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆ ವ್ಯವಸ್ಥೆಯಿಂದ ಹೊರಬಂದು, ರಾಜ್ಯ ಸರ್ಕಾರವೇ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅವರು ಜೂ.29 ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಯಾವ ರಾಜ್ಯದಲ್ಲಿ ಪ್ರಶ್ನಾಪತ್ರಿಕೆ ಸೋರಿಕೆಯಾಗಿದೆ ಎಂಬುವುದನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ನೀಟ್ ಪರೀಕ್ಷೆಯ ಅಕ್ರಮದ ಬಗ್ಗೆ ದೇಶದಾಧ್ಯಂತ ಕಾಂಗ್ರೆಸ್ ಪ್ರತಿಭಟಿಸಿದರೂ, ದೇಶದ ವಿದ್ಯಾರ್ಥಿಗಳ ಹಾಗೂ ಯುವಜನತೆಯ ಮೇಲೆ ಯಾವುದೇ ಕಾಳಜಿ ಇಲ್ಲದೇ ಕೇಂದ್ರ ಸರ್ಕಾರ ಅಸಹಾಯಕತೆ ತೋರುತ್ತಿದೆ. ಕೇಂದ್ರ ಸರ್ಕಾರ ಟ್ಯೂಟೋರಿಯಲ್‌ಗಳೊಂದಿಗೆ ಸೇರಿಕೊಂಡು ಪ್ರಶ್ನಾಪತ್ರಿಕೆಯನ್ನು ಸೋರಿಕೆ ಮಾಡಿದೆ ಎಂದು ದೂರಿದರು.
ಈ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಬಿಡುತ್ತಿಲ್ಲ. ಕನಸ್ಸನ್ನು ಕಟ್ಟುಕೊಂಡ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾರೂ ಜವಾಜ್ದಾರಿ ತೆಗೆದುಕೊಳ್ಳಲು ಸಿದ್ದರಿಲ್ಲ. ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯ ಬೀದುಪಾಲು ಆಗಿದೆ ಎಂದರು.
ಈ ಹಗರಣದ ತನಿಖೆಯೂ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ಕಲ್ಪಿಸುತ್ತಿಲ್ಲ. ಪರೀಕ್ಷೆಯ ಒಎಂಆರ್ ಶೀಟ್ಗಳನ್ನು ಬಹಿರಂಗಪಡಿಸುವಂತೆ ಕೇಳಿದರೂ ಸ್ಪಂದಿಸುತ್ತಿಲ್ಲ. ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್ಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂದು ದಿಕ್ಕೇ ತೋಚದ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ ಎಂದು ದೂರಿದರು.
ಕೆಲವು ರಾಜ್ಯಗಳಲ್ಲಿ ಈಗಾಗಲೇ ನೀಟ್ ಪರೀಕ್ಷೆಯ ವ್ಯವಸ್ಥೆಯಿಂದ ಹೊರಬಂದು ಪ್ರತ್ಯೇಕ ಪರೀಕ್ಷೆ ನಡೆಸಲು ಮುಂದಾಗಿದ್ದು, ನನ್ನ ರಾಜ್ಯವೂ ಹೊರ ಬಂದು ಪ್ರತ್ಯೇಕ ಪರೀಕ್ಷೆ ನಡೆಸಿ ಮೆರಿಟ್ ಆಧಾರದಲ್ಲಿ ಸೀಟನ್ನು ಹಂಚಿಕೆ ಮಾಡಬಹುದಾಗಿದೆ ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಹಿಂದೆ ರಾಜ್ಯ ಸರ್ಕಾರಗಳೇ ಈ ಪ್ರವೇಶ ಪರೀಕ್ಷೆ ನಡೆಸುತ್ತಿದ್ದಾಗ ಇಂತಹ ಗೊಂದಲಗಳಿರಲಿಲ್ಲ. ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ನೀಟ್‌ನಲ್ಲಿ ಕೇಳಲಾಗುತ್ತಿತ್ತು. ರಾಜ್ಯದಲ್ಲಿ ವೀರಪ್ಪ ಮೈಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಿಇಟಿ ಪರೀಕ್ಷೆಯನ್ನು ಪ್ರತ್ಯೇಕವಾಗಿ ರಾಜ್ಯದಲ್ಲಿ ನಡೆಸುತ್ತಿದ್ದಾಗ ವಿದ್ಯಾರ್ಥಿಗಳಿಗೆ ಉಪಕಾರವಾಗುತ್ತಿತ್ತು. ಆದರೆ ಕಳೆದ 10 ವರ್ಷದಿಂದ ನೀಟ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ವಹಿಸಿಕೊಂಡ ನಂತರ ಮೊದಲಿನಿಂದಲೂ ಅದರಲ್ಲಿ ಲೋಪಗಳು ಕಂಡುಬರುತ್ತಲೇ ಇವೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗುವ ಹಾನಿ ತಡೆಯುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ಗಳ ಜೊತೆ ಚರ್ಚಿಸಿದ್ದೇನೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ 17 ಕೋಟಿ ಲಭ್ಯವಿದೆ. ಪ್ರತಿ ತಾಲ್ಲೂಕಿಗೂ ತಲಾ 50 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.
ವಿಕೋಪ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡ ರಚಿಸಿ, ಅದರ ಉಸ್ತುವಾರಿ ನೋಡಿಕೊಳ್ಳುವವರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಜಿಲ್ಲೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೂರು ಜೀವಹಾನಿಯಾಗಿದ್ದು ಆಘಾತಕರ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ವಿವರಣೆ ಪಡೆಯುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದರು.
ಪಕ್ಷದ ಮುಖಂಡಾರದ ಭಾಸ್ಕರ ರಾವ್, ಅಲಿಸ್ಟರ್ ಡಿಕುನ್ಹ, ವಿಕಾಸ್ ಶೆಟ್ಟಿ ಹಾಗೂ ನಿತ್ಯಾನಂದ ಶೆಟ್ಟಿ ಭಾಗವಹಿಸಿದ್ದರು.