
Mangalore: ಇಂಧನ ಬೆಲೆ ಏರಿಕೆ-ಅಧಿವೇಶನದಲ್ಲೂ ಪ್ರತಿಭಟನೆ
ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗದಿದ್ದರೂ ರಾಜ್ಯದಲ್ಲಿ ಸರ್ಕಾರ ದಿಢೀರನೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ವಿಧಾನಸಭಾ ಅಧಿವೇಶನದಲ್ಲೂ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊರೆ ಹೊರಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. ಇಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಸಹಿತ ಸರಕು ಸಾಗಾಣಿಕೆ, ಸಾರಿಗೆ ದರಗಳೂ ಹೆಚ್ಚಳವಾಗಲಿದೆ ಎಂದರು.
ಸರ್ಕಾರ ತನ್ನ ಘೋಷಿತ ಗ್ಯಾರಂಟಿಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬೆಲೆ ಏರಿಕೆಯ ಬರೆ ಹಾಕುವ ಬದಲು ಸರ್ಕಾರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮೊದಲು ನಿಲ್ಲಿಸಲಿ. ಕಾಂಗ್ರೆಸ್‌ನ ಹುಟ್ಟುಗುಣವೇ ಜನರನ್ನು ಮೂರ್ಖರನ್ನಾಗಿಸುವುದಾಗಿದ್ದು, ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇಂಧನ ದರ ಏರಿಕೆ ವಿರೋಧಿಸಿ ಜೂ.20ರಂದು ಬೆಳಗ್ಗೆ 10.30ಕ್ಕೆ ನಗರದ ಪಿವಿಎಸ್ ವೃತ್ತ ಬಳಿಕ ಬಿಜೆಪಿ ದಕ್ಷಿಣ ಮಂಡಲ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ನಾಗರಿಕರಿಗೂ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ ಎಂದರು.
ಅನುದಾನಕ್ಕಾಗಿ ಸ್ಪೀಕರ್‌ಗೆ ಮನವಿ ಸಲ್ಲಿಸುತ್ತೇನೆ..
ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ 13 ತಿಂಗಳಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ ಅನುದಾನಕ್ಕೂ ತಡೆ ವಿಧಿಸಿದೆ.
ಕಾಂಗ್ರೆಸ್ ಶಾಸಕರು ಅನುದಾನದ ಕೊರತೆ ಇಲ್ಲ ಎನ್ನುತ್ತಿದ್ದಾರೆ ಎಂದು ಶಾಸಕರು, ಇತ್ತೀಚೆಗೆ ಸ್ಪೀಕರ್ ಯು.ಟಿ. ಖಾದರ್ ಅವರು ಬಿಜೆಪಿ ಶಾಸಕರು ಅನುದಾನ ಸಿಗದ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ತಂದಿದ್ದರೆ ನಾನೇ ಮುಖ್ಯಮಂತ್ರಿಗಳಿಗೆ ಅನುದಾನ ನೀಡುವಂತೆ ಸೂಚಿಸುವುದಾಗಿ ಹೇಳಿದ್ದರು. ಹಾಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗೆ ಸೂಚಿಸುವಂತೆ ನಾನೇ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸುತ್ತೇನೆ. ಹಾಗಾದರೂ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗುತ್ತದೋ ನೋಡುತ್ತೇನೆ ಎಂದು ಹೇಳಿದರು.
ಮುಖಂಡರಾದ ರಮೇಶ್ ಕಂಡೆಟ್ಟು, ಪಾಲಿಕೆ ಸದಸ್ಯರಾದ ದಿವಾಕರ್ ಪಾಂಡೇಶ್ವರ, ಪೂರ್ಣಿಮಾ ಹಾಗೂ ಅಶ್ವಿತ್ ಕೊಟ್ಟಾರಿ, ಭರತ್ ಸೂಟರ್ಪೇಟೆ, ರಮೇಶ್ ಹೆಗ್ಡೆ, ಲಲ್ಲೇಶ್, ಪೂರ್ಣಿಮಾ ರಾವ್ ಉಪಸ್ಥಿತರಿದ್ದರು.