Mangalore: ಗಿಡಗಳ ಸಂರಕ್ಷಣೆಯಿಂದ ಪರಿಸರ ಸಮತೋಲನ: ಆಂಟನಿ ಮರಿಯಪ್ಪ
ಮಂಗಳೂರು: ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವುದರಿಂದ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಸಕಲ ಜೀವಿಗಳಿಗೂ ಆಧಾರವಾದ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆಯ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಹೇಳಿದರು.
ದ.ಕ. ಅರಣ್ಯ ಇಲಾಖೆ, ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ಬೆಸೆಂಟ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಂಯಿಂದ ನಗರದ ಲಾಲ್‌ಭಾಗ್‌ನ ವನಿತಾ ಪಾರ್ಕ್‌ನಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನ ಮತ್ತು ಗಿಡಗಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಪ್ರತಿ ವರ್ಷ ಲಕ್ಷಾಂತರ ಗಿಡ ಮರಗಳ ನಾಶವಾಗುತ್ತದೆ. ಜನತೆ ತಮ್ಮ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ಕೈಜೋಡಿಸಬೇಕು. ಪರಿಸರ ದಿನಾಚರಣೆಯಂದು ನೆಟ್ಟ ಗಿಡಗಳನ್ನು ಸಂರಕ್ಷಣೆ ಮಾಡಿ ವರ್ಷ ಕಳೆದ ಬಳಿಕ ಗಿಡದ ಹುಟ್ಟು ಹಬ್ಬ ಆಚರಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದರು.
ಬೆಸೆಂಟ್ ಯುವ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಹಿಂದಿನ, ಕಳೆದ ವರ್ಷದ ಗಿಡಗಳನ್ನು ಶೃಂಗರಿಸಿ, ಆರತಿ ಬೆಳಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಬೆಸೆಂಟ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕಿ ದೀಕ್ಷಿತಾ, ನಿವೃತ್ತ ವಲಯ ಅರಣ್ಯಾಧಿಕಾರಿ ಪರಮೇಶ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕಾರಿ ಸಮಿತಿಯ ಸದಸ್ಯ ರಾಜೇಶ್ ದಡ್ಡಂಗಡಿ, ಮಂಗಳೂರು ಸಿಟಿ ರೋಟರ‍್ಯಾಕ್ಟ್‌ನ ಕಾರ್ಯದರ್ಶಿ ವರುಣ್ ರೈ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.
