
Mangalore: ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ: ಶಾಸಕ ಕಾಮತ್
ಮಂಗಳೂರು: ಬಿಜೆಪಿಯ ವಿಜಯೋತ್ಸವದಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಹೆಡೆಮುರಿ ಕಟ್ಟುವ ಮೂಲಕ ಕಾನೂನು ಕ್ರಮಗಳನ್ನು ಬಿಗಿಗೊಳಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭವನ್ನು ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಪಕ್ಷದ ವತಿಯಿಂದ ಎಲ್ಲೆಡೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ ತಮ್ಮ ಪಾಡಿಗೆ ಬೋಳಿಯಾರ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ದುಷ್ಕರ್ಮಿಗಳ ತಂಡ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದೆ. ರಾಜ್ಯದ ಗೌರವಾನ್ವಿತ ಸ್ಪೀಕರ್ ಅವರ ಕ್ಷೇತ್ರದಲ್ಲೇ ಇಂತಹ ರಾಜಕೀಯ ದ್ವೇಷದ ದುಷ್ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು ಜಿಲ್ಲೆಯಲ್ಲಿ ಕೇರಳ ಹಾಗೂ ಪ. ಬಂಗಾಳ ಮಾದರಿಯ ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ, ಗೂಂಡಾ ಕಾಯ್ದೆ ಸೇರಿದಂತೆ ದೌರ್ಜನ್ಯ ಮುಂದುವರಿದಿದ್ದು ಇದೀಗ ಚೂರಿ ಇರಿತ, ಮಾರಣಾಂತಿಕ ಹಲ್ಲೆಯ ಮಟ್ಟಕ್ಕೆ ತಲುಪಿ ಕಾಂಗ್ರೆಸ್ ಆಡಳಿತದಲ್ಲಿ ನ್ಯಾಯವೇ ಇಲ್ಲವಾಗಿದೆ. ಇಂತಹ ರಾಜಕೀಯ ದ್ವೇಷದ ಹಲ್ಲೆಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಅಶಾಂತಿಗೆ ಕಾರಣವಾಗಲಿದ್ದು ಕೂಡಲೇ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ಎಚ್ಚರಿಸಿದರು.