Mangalore: ಅಪಾಯದಲ್ಲಿರುವ ಮನೆಗಳು-ನಿವಾಸಿಗಳ ಸ್ಥಳಾಂತರಕ್ಕೆ ಡಿಸಿ ಸೂಚನೆ

Mangalore: ಅಪಾಯದಲ್ಲಿರುವ ಮನೆಗಳು-ನಿವಾಸಿಗಳ ಸ್ಥಳಾಂತರಕ್ಕೆ ಡಿಸಿ ಸೂಚನೆ


ಮಂಗಳೂರು: ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದರು.

ಅವರು ಗುರುವಾರ ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ  ಮನೆಗಳಿಗೆ ಸ್ಥಳಾಂತರಿಸಲು ಅವರು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶಿಸಿದರು. ಅಲ್ಲದೇ, ಘಟನೆಗೆ ಕಾರಣರಾದ ಖಾಸಗಿ ಮನೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದರು.

ಬಳಿಕ ಕೆಂಜಾರು ಶ್ರೀ ದೇವಿ ಕಾಲೇಜು ಆವರಣದಲ್ಲಿ ಉಂಟಾದ ಭೂಕುಸಿತ, ಮರವೂರು ಅಂತೋನಿಕಟ್ಟೆ ಎಂಬಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುರತ್ಕಲ್ ಬಾಳ ಸಮೀಪ ಐ.ಎಸ್.ಪಿ.ಆರ್.ಎಲ್.ಗೆ ಸೇರಿದ ಪೈಪ್‌ಲೈನ್ ಹಾದುಹೋದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತುರ್ತು ಕ್ರಮ ಕೈಗೊಳ್ಳಲು ಐ.ಎಸ್.ಪಿ.ಆರ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಸಮೀಪ ತಡೆ ಬೇಲಿ ಹಾಕಲು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article