Moodubidire: ಮೂಡುಬಿದಿರೆಯಲ್ಲಿ ಹಸ್ತಪ್ರತಿ, ತಾಡೋಲೆ ಪ್ರತಿಸಂರಕ್ಷಣಾ ಕಾರ್ಯಾಗಾರ

Moodubidire: ಮೂಡುಬಿದಿರೆಯಲ್ಲಿ ಹಸ್ತಪ್ರತಿ, ತಾಡೋಲೆ ಪ್ರತಿಸಂರಕ್ಷಣಾ ಕಾರ್ಯಾಗಾರ


ಮೂಡುಬಿದಿರೆ: ಶ್ರೀ ಜೈನ ಮಠ, ರಮಾರಾಣಿ ಶೋಧ ಸಂಸ್ಥಾನದಲ್ಲಿ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಆಶ್ರಯ ಹಾಗೂ ಉಡುಪಿ ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರದ ಸಹಕಾರದಿಂದ ಒಂದು ದಿನದ ಹಸ್ತ ಪ್ರತಿ, ತಾಡಾ ಓಲೆ ಪ್ರತಿಗಳ ಸಂರಕ್ಷಣಾ ಕಾರ್ಯಾಗಾರ ಶನಿವಾರ ನಡೆಯಿತು.

ಹಿರಿಯ ಶ್ರಾವಕ ಶಂಭವ ಕುಮಾರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆರ್ಶೀವಚನ ನೀಡಿ ಹಸ್ತಪ್ರತಿ, ತಾಡೋಲೆಗಳು ನಮಗೆ ಐತಿಹಾಸಿಕ ಮಹತ್ವವನ್ನು ತಿಳಿಸುವ ಅಪೂರ್ವ ಮಾದ್ಯಮ. ತಾಡವೋಲೆ ಸಾಹಿತ್ಯವನ್ನು ಸಂರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಹಿರಿಯ ವಿದ್ವಾಂಸ ಡಾ. ಉಮಾನಾಥ ಶೆಣೈ ದಿಕ್ಸೂಚಿ ಭಾಷಣ ಮಾಡಿ, ಶಿಲಾ ಶಾಸನಗಳನ್ನು ಶಾಸ್ತ್ರೀಯವಾಗಿ ಓದುವ ಕ್ರಮ ತಿಳಿಸಿದರು.

ಪ್ರೊ. ಯು.ಸಿ. ನಿರಂಜನ ಅವರು ತಾಡವೋಲೆಗಳಲ್ಲಿ ಸಾಹಿತ್ಯ, ಇತಿಹಾಸ, ಖಗೋಲ, ಆಯುರ್ವೇದಾದಿ ವಿಷಯಗಳ ಭಂಡಾರವೇ ಹುದುಗಿದ್ದು ಇವುಗಳನ್ನು ಅಧ್ಯಯನ ಮಾಡಲು ಮೂಲವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಉನ್ನತ ಸಮಿತಿ ಸದಸ್ಯ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ತಾಡವೋಲೆಪ್ರತಿ, ತಾಮ್ರದ ಶಾಸನಗಳ ಸಂರಕ್ಷಣ ಕ್ರಮಗಳನ್ನು ತಿಳಿಸಿದರು. ಪ್ರತಿ ವರ್ಷಕ್ಕೊಮ್ಮೆಯಾದರೂ ತಾಡೋಲೆಗಳಲ್ಲಿರುವ ತೇವಾಂಶ ನಿವಾರಿಸಿ, ಪುಲ್ಲತೈಲ ಬಳಸಿ ಲಘುವಾಗಿ ಒರೆಸಿ ಜತನದಿಂದ ಕಾಪಾಡಬೇಕಾಗಿದೆ ಎಂದು ಸ್ವಾನುಭವದಿಂದ ವಿವರಣೆ ನೀಡಿದರು.

ಇತಿಹಾಸ ಉಪನ್ಯಾಸಕ ಶೃತೇಶ ಆಚಾರ್ಯ ಮೂಡುಬೆಳ್ಳೆ, ಹಂಪಿ ವಿವಿ ಜಂಗಮಮಠದ ಚಿತ್ರಕಲಾ ಉಪನ್ಯಾಸಕ ರಾಘವೇಂದ್ರ ಅಮೀನ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಗಾರದಲ್ಲಿ ಮಾರ್ಗದರ್ಶನ ನೀಡಿದರು.

ಪ್ರತಿನಿಧಿಗಳಾಗಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳು, ಆಸಕ್ತರಿಗೆ ಶ್ರೀ ಜೈನಮಠದ ಧವಳತ್ರಯ ಜೈನಕಾಶಿ ಟ್ರಸ್ಟ್ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article