
Moodubidire: ನೀಟ್ ಭ್ರಷ್ಟಾಚಾರ ಸರಿಪಡಿಸಲು ತಜ್ಞರ ಸಮಿತಿ ರಚಿಸಲಿ: ಮಾಜಿ ಸಚಿವ ಅಭಯಚಂದ್ರ
ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಮೂಲಕ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದ್ದು ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಪ್ರತಿಭಾವಂತ ಬಡಮಕ್ಕಳಿಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸಿಇಟಿ ಪರಿಕಲ್ಪನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿಯವರು. ಇದರಿಂದಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ಮಂದಿ ವೈದ್ಯರು ಮತ್ತು ಇಂಜಿನಿಯರ್‌ಗಳು ಹೊರಬಂದಿದ್ದು. ಇದು ದೇಶಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಸಿಇಟಿ ಜಾರಿಗೆ ಬಂದ ಬಳಿಕ ಮೆಡಿಕಲ್ ಮತ್ತು ಇಂಜಿನಿಯರಿಂಗ್‌ಗೆ ಬೇಡಿಕೆ ಹೆಚ್ಚಾದುದರಿಂದ ಅತೀ ಹೆಚ್ಚು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಗೆ ಕಾರಣವಾಗಿದೆ. ಇದೀಗ ಸಿಇಟಿಯ ಮಾನದಂಡದಲ್ಲೇ ದೇಶವ್ಯಾಪಿ ನೀಟ್ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಇದರಲ್ಲಿ ಅಕ್ರಮ ನಡೆದಿದ್ದರಿಂದ ಪ್ರತುಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಇಟಿ ಜನಕ, ಕೇಂದ್ರದ ಮಾಜಿ ಕಾನೂನು ಸಚಿವ ವೀರಪ್ಪ ಮೊಯಿಲಿ ಹಾಗೂ ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಮುಂದೆ ಇಂತಹ ಭ್ರಷ್ಟಾಚಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.