Moodubidire: ವಿದ್ಯೆಯ ಜತೆಗೆ ಸಾಮಾನ್ಯ ಜ್ಞಾನವೂ ಅವಶ್ಯಕ: ಪ್ರಕಾಶ್ ಶೆಟ್ಟಿ

Moodubidire: ವಿದ್ಯೆಯ ಜತೆಗೆ ಸಾಮಾನ್ಯ ಜ್ಞಾನವೂ ಅವಶ್ಯಕ: ಪ್ರಕಾಶ್ ಶೆಟ್ಟಿ


ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಸಾಮಾನ್ಯ ಜ್ಞಾನವು ಹೆಚ್ಚು ಅವಶ್ಯಕ. ಯೋಜನೆ, ಆಡಳಿತ, ವ್ಯವಹಾರದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದು ಎಂಆರ್‌ಜಿ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು.

ಆಳ್ವಾಸ್ ಸಂಸ್ಥೆಯ ವತಿಯಿಂದ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಆಳ್ವಾಸ್ ಪ್ರಗತಿಯ 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸಾಂಸ್ಕೃತಿಕ, ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗದ ಸದಾವಕಾಶವನ್ನು ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ಕಾರ್ಯಪ್ರವೃತ್ತಿ ಮತ್ತು ದೃಷ್ಟಿಕರಣ ಎಂಬ ಎರಡು ಬಹು ಮುಖ್ಯ ಕೌಶಲ್ಯವನ್ನು ರೂಢಿಸಿಕೊಳ್ಳುವ ಮನೋಭಾವನೆ ಪ್ರತಿ ಉದ್ಯೋಗಾಕಾಂಕ್ಷಿಯಲ್ಲಿರಬೇಕು ಎಂದ ಅವರು ಅದೃಷ್ಟದ ಜೊತೆಗೆ ಪ್ರಯತ್ನವಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಕಾಣಲು ಸುಲಭ ಸಾಧ್ಯ ಎಂದರು.

ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವಾಸ್ ಪ್ರಗತಿ ಎನ್ನುವ ಬೃಹತ್ ಉದ್ಯೋಗ ಮೇಳ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಶೈಕ್ಷಣಿಕವಾಗಿ ಮುಂದಿರುವ ಕರಾವಳಿ ಭಾಗದಲ್ಲಿ ಉದ್ಯೋಗ ಆಸಕ್ತರು ಬಹಳಷ್ಟು ಜನರಿದ್ದಾರೆ. ಆದ್ದರಿಂದ ಇನ್ನಷ್ಟು ಐಟಿ ಕಂಪನಿಗಳು ಕರಾವಳಿ ಭಾಗಕ್ಕೆ ಭೇಟಿ ನೀಡುವುದು ಹೆಚ್ಚು ಅನಿವಾರ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಟ್ಟು 6 ಪ್ರತಿಷ್ಟಿತ ಕಂಪನಿಯ ಸ್ಥಾಪಕರಾದ ಗ್ಲೋಟಚ್ ಟೆಕ್ನಾಲಜಿಯ ಅಧ್ಯಕ್ಷೆ ವಿದ್ಯಾ ರವಿಚಂದ್ರನ್, ನೀವಿಯಸ್ ಸೊಲ್ಯೂಷನ್ಸ್ ಸಹ ಸಂಸ್ಥಾಪಕ ಮತ್ತು ಸಿಇಒ ಸುಯೋಗ ಶೆಟ್ಟಿ, ಮಂಗಳೂರಿನ ಟಿಐಇಯ ಸಂಸ್ಥಾಪಕ, 99 ಗೇಮ್ಸ್ ಮತ್ತು ರೋಬೋಸಾಫ್ಟ್ ನ ಅಧ್ಯಕ್ಷ ರೋಹಿತ್ ಭಟ್, ಇಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ನಿರ್ದೇಶಕ ಆನಂದ ಫೆರ್ನಾಂಡಿಸ್, ಡೆಲಿವರಿ ಜುಯೆಗೋ ಸ್ಟುಡಿಯೊಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ, ಮಂಗಳೂರಿನ ಬಿಪಿಎಂ ಆಪರೇಶನ್ಸ್ ಇನ್ಫೋಸಿಸ್‌ನ ಮುಖ್ಯಸ್ಥ ಲಲಿತ್ ರೈ ಅವರನ್ನು ಸನ್ಮಾನಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ಉದ್ಯೋಗ ಮೇಳವು ಒಂದು ರೀತಿಯ ಫ್ಯಾಷನ್ ಆಗದೆ, ಪ್ಯಾಷನ್ ಆಗಬೇಕು. ಇದು ಸಂಪೂರ್ಣವಾಗಿ ಉಚಿತವಾಗಿ ನಡೆಯುವಂತಹ ಬೃಹತ್ ಉದ್ಯೋಗ ಮೇಳ. ಈ ಬಾರಿಯೂ ದೇಶ ವಿದೇಶಗಳಿಂದ 254 ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿಯನ್ನು ನಡೆಸಲು ಮುಂಬರುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಉದ್ಯೋಗ ಆಸಕ್ತರು ಗುಂಪು ಗುಂಪಾಗಿ ಸೇರಿ ಮೋಜು ಮಾಡುವುದಲ್ಲ, ವೈಯಕ್ತಿಕವಾಗಿ ಎಲ್ಲವನ್ನೂ ಹೆಚ್ಚು ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಉದ್ಯಮಿ ಕೆ. ಶ್ರೀಪತಿ ಭಟ್ ಅತಿಥಿಯಾಗಿ ಭಾಗವಹಿಸಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥೆ ಡೀನ್ ಪ್ರಿಯಾ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿದರು.

ಆಳ್ವಾಸ್ ಪ್ರಗತಿಯ ವಿಶೇಷತೆ: 

ಈ ಬಾರಿ ಒಟ್ಟು 12 ವಿಭಾಗ, 600ಕ್ಕೂ ಅಧಿಕ ಕಂಪೆನಿ ಎಚ್‌ಆರ್‌ಗಳು, ಕಂಪನಿ ನಿರ್ದೇಶನಾಲಯ, 600 ವಿದ್ಯಾರ್ಥಿ ಸ್ವಯಂ ಸೇವಕರು, 300 ಪ್ರಮುಖ ಸಿಬ್ಬಂದಿಗಳು, 952 ಕಂಪ್ಯೂಟರ್ ವ್ಯವಸ್ಥೆ, ಒಳಗೊಂಡ ಬೃಹತ್ ಉದ್ಯೋಗ ಮೇಳ.

ಇದರ ಜೊತೆಗೆ ಅಭ್ಯರ್ಥಿಗಳು ಕ್ಯಾಂಪಸ್‌ಗೆ ಪ್ರವೇಶವಾದ ನಂತರ ನೋಂದಣಿ ವ್ಯವಸ್ಥೆ, ವಿದ್ಯಾರ್ಹತೆಗೆ ತಕ್ಕಂತೆ ಕಲರ್ ಕೋಡ್ ಅನ್ನು ವಿತರಿಸಲಾಯಿಸುವ ವ್ಯವಸ್ಥೆ, ಕಲರ್ ಕೋಡ್‌ಗೆ ಸಮವಾಗಿರುವ ವಿವಿಧ ಉದ್ಯೋಗಗಳ ಸಂದರ್ಶನ ನೀಡುವ ವ್ಯವಸ್ಥೆ, ಎಲ್ಲ ವಿಭಾಗದ ಉದ್ಯೋಗದ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಉಪಯುಕ್ತ ಮಾಹಿತಿ ಕೈಪಿಡಿಯನ್ನು ಪ್ರತಿ ಅಭ್ಯರ್ಥಿಗಳಿಗೆ ಕೊಡಲಾಯಿತು. ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಉದ್ಯೋಗ ಮಾಹಿತಿ ಕೇಂದ್ರ ಹಾಗೂ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿತ್ತು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article