Moodubidire: ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಗ್ರಾ.ಪಂ. ನೌಕರರು: ಅಧಿಕಾರಿಗಳು ಮೌನ

Moodubidire: ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಗ್ರಾ.ಪಂ. ನೌಕರರು: ಅಧಿಕಾರಿಗಳು ಮೌನ


ಮೂಡುಬಿದಿರೆ: ಆರೋಗ್ಯ ಭದ್ರತೆಯಿಲ್ಲ, ಭವಿಷ್ಯನಿಧಿಯಿಲ್ಲ, ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಸಹಿತ ಸರಕಾರದ ಹಲವಾರು ಸವಲತ್ತುಗಳಿಂದ ಗ್ರಾ.ಪಂಚಾಯತ್ ನೌಕರರು ವಂಚಿತರಾಗಿದ್ದು ಇವರ ಈ ಸಮಸ್ಯೆಗಳನ್ನು ಬಗೆ ಹರಿಸದೆ ಅಧಿಕಾರಿಗಳು ಮೌನ ವಹಿಸಿದ್ದಾರೆ.

ತಮಗೆ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸಬೇಕೆಂಬುದರ ಬಗ್ಗೆ ಗ್ರಾ.ಪಂ. ನೌಕರರು ಕಳೆದ ಹಲವಾರು ವರ್ಷಗಳಿಂದ ಸರಕಾರವನ್ನು ಒತ್ತಾಯ ಮಾಡುತ್ತಾ ಬಂದಿದ್ದರೂ ಅವರ ಬೇಡಿಕೆಗಳು ಈಡೇರದೆ ಹಾಗೆಯೇ ಮನವಿ ಪತ್ರಗಳಲ್ಲಿಯೇ ಉಳಿದುಕೊಂಡಿರುವುದರಿಂದ ಅನಾರೋಗ್ಯ ಪೀಡಿತರಾಗಿರುವ ನೌಕರರು ಸಾವನ್ನಪ್ಪಿದಾಗ ಅವರ ಕುಟುಂಬಕ್ಕೆ ಯಾವುದೇ ನೆರವು ಸಿಗದೆ ಕಂಗಾಲಾಗುತ್ತಿದ್ದಾರೆ.

ತಮ್ಮ ಮನೆಗಳಿಗೆ ಆಧಾರ ಸ್ಥಂಭವಾಗಿರುವ ಗ್ರಾ.ಪಂ. ನೌಕರರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೆ ಅವರಿಗೆ ಇಎಸ್‌ಐ ಇರಲ್ಲ ಅಲ್ಲದೆ ಪಂಚಾಯತ್ ನಿಂದ ಬರಬೇಕಾಗಿರುವ ತಿಂಗಳ ಸಂಬಳವೂ ಬರಲ್ಲ ಇದರಿಂದಾಗಿ ಆರ್ಥಿಕವಾಗಿ ಕಂಗಾಲಾಗುವ ನೌಕರರು ಮಾನಸಿಕವಾಗಿ ನೋವನ್ನನುಭವಿಸಿ ಇಹಲೋಕವನ್ನು ತ್ಯಜಿಸಿದ ಘಟನೆಯೂ ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ತೀವೃವಾದ ಅನಾರೋಗ್ಯಕ್ಕೆ ತುತ್ತಾಗುವ ನೌಕರರಿಗೆ ಕಾರ್ಯನಿರ್ವಹಿಸಲು ಪಂಚಾಯತ್‌ಗೆ ಹೋಗಲು ಅಸಾಧ್ಯವಾಗುತ್ತದೆ ಈ ಸಂದರ್ಭದಲ್ಲಿ ನೌಕರರಿಗೆ ವೇತನವನ್ನು  ಪಾವತಿಸಬೇಕೆಂದು ಗ್ರಾ.ಪಂ. ನೌಕರರು ಸಂಘವು ಆಯುಕ್ತರಿಗೆ, ಅಪರ ಕಾರ್ಯದರ್ಶಿಗಳಿಗೆ ಮತ್ತು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದಕ್ಕೆ ನ್ಯಾಯ ಸಿಗದಿರುವುದು ದುರಂತ.

ಮೂಡುಬಿದಿರೆಯ ವಾಲ್ಪಾಡಿ ಗ್ರಾ.ಪಂಚಾಯತ್‌ನ ನೌಕರ ವಸಂತ ಅವರು ಕರುಳು ಸಂಬಂಧಿ ಕಾಯಿಲೆಯಿಂದ ಇತ್ತೀಚೆಗೆ ನಿಧನರಾಗಿದ್ದರು. ಅನಾರೋಗ್ಯದಿಂದ ಕಳೆದ ಏಳು ತಿಂಗಳು ಅವರಿಗೆ ಪಂಚಾಯತ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಗಿರಲಿಲ್ಲ ಇದರಿಂದಾಗಿ ಅವರಿಗೆ ಆ ಏಳು ತಿಂಗಳ ವೇತನ ಸಿಕ್ಕಿಲ್ಲ ಇದೇ ನೋವಿನಿಂದ ಮಾನಸಿಕವಾಗಿದ್ದ ಕುಗ್ಗಿದ್ದ ಅವರು ಕೊನೆಯುಸಿರೆಳೆದಿದ್ದರು. ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಅವರ ಕುಟುಂಬವು ಬಡತನದಿಂದ ಕೂಡಿದ್ದು ವಸಂತ್ ಅವರಿಗೆ ಚಿಕಿತ್ಸೆ ಕೊಡಿಸಲು ಕಷ್ಟಪಟ್ಟಿದ್ದರು.

ಇದಲ್ಲದೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ನ ಸಿಬ್ಬಂದಿ ಚಂದ್ರಹಾಸ್ ಅವರು ಕೂಡಾ ಪಂಚಾಯತ್‌ಗೆ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದ ಸಂದರ್ಭ ದಾರಿ ಮಧ್ಯೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇವರ ಕುಟುಂಬವು ಕೂಡಾ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇವರಿಗೂ ಸಂಬಂಧಪಟ್ಟ ಇಲಾಖೆಯೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.

ಈಗಾಗಲೇ ಹಲವು ಜನ ನೌಕಕರು ಅನಾರೋಗ್ಯದಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಇನ್ನು ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ ಈ ಸಿಬಂದಿಗಳಿಗೆ ಸರಕಾರದ ಯಾವುದೇ ರೀತಿಯ ಭದ್ರತೆಗಳು ಇಲ್ಲದಿರುವುದರಿಂದ ತಮ್ಮ ಕುಟುಂಬದ ರಕ್ಷಣೆ ಮಾಡಲಾಗುತ್ತಿಲ್ಲವಲ್ಲ ಎಂಬುದರ ಬಗ್ಗೆ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿದ್ದಾರೆ. 

ಪಂಚಾಯತ್‌ನಲ್ಲಿ ಪ್ರಾಮಾಣಿಕವಾಗಿ ದುಡಿಯುವ ತಮ್ಮಂತಹ ನೌಕರರಿಗೆ ಸರಕಾರವು ಸಮಸ್ಯೆಗಳನ್ನು ಆಲಿಸಿ ಭವಿಷ್ಯನಿಧಿ, ಆರೋಗ್ಯ ಭದ್ರತೆ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸಿ ನ್ಯಾಯ ಒದಗಿಸಬೇಕಾಗಿದೆ ಎಂಬುದೇ ಸಿಬಂದಿಗಳ ಕೋರಿಕೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article