
Moodubidire: ಆಳ್ವಾಸ್ ಸಾಂಪ್ರದಾಯಿಕ ದಿನದಲ್ಲಿ ಗಮನ ಸೆಳೆದ ಹೆಣ್ಣು ಮಕ್ಕಳ ಹುಲಿವೇಷ ಕುಣಿತ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ನಡೆದ ಸಾಂಪ್ರದಾಯಿಕ ದಿನದ ಅಂಗವಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ ಹೆಣ್ಣುಮಕ್ಕಳ ಹುಲಿವೇಷ ಕುಣಿತವು ಗಮನ ಸೆಳೆಯಿತು.
ಮಹಾರಾಷ್ಟ್ರ ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದ್ದರು.
ಕರಾವಳಿಯ ಪಿಲಿವೇಷ ಕುಣಿತವನ್ನು ಹೆಣ್ಣುಮಕ್ಕಳು ಪ್ರದರ್ಶಿಸಿದ್ದು ಗಂಡು ಮಕ್ಕಳಿಗೆ ಸಮಾನವಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಎಂಜಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಈ ಹುಲಿವೇಷ ಕುಣಿತವನ್ನು ಪ್ರಸ್ತುತಪಡಿಸಿದ್ದು ಬರ್ಕೆ ಯದ್ದು ಅವರು ತರಬೇತಿಯನ್ನು ನೀಡಿದ್ದರು.
ಪಿಲಿ ನಲಿಕೆ, ನಿಹಾಲ್ ತಾವ್ರೋರಿಂದ ಹಾಡುಗಳ ಕಾರ್ಯಕ್ರಮ, ಬೀದಿ ಬದಿಯ ಮನೋರಂಜನಾ ಆಟಗಳ ಪ್ರದರ್ಶನ, ಫೈರ್ ಡ್ಯಾನ್ಸ್, ಕನ್ನಡ ಕಾಮಿಡಿ, ಬೀಟ್ ಗುರು ತಂಡದ ಕಾರ್ಯಕ್ರಮ, ಆಹಾರ ಮೇಳ, ಕಲಾ ಪ್ರದರ್ಶನಗಳಿಂದ ಕಾರ್ಯಕ್ರಮ ಕಂಗೊಳಿಸಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಸಿನಿಮಾದ ಪರಿಚಯ ಕಾರ್ಯಕ್ರಮ ನಡೆಯಿತು. ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನಿಯಾ ಅಯ್ಯರ್, ನಟಿ ಮಾನಸಿ ಸುಧೀರ್, ಸೃಜನಾ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವಿನಾಶ್ ಕಟೀಲ್ ನಿರೂಪಿಸಿದರು.