
Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ: ಡಿ.ಕೆ. ಶಿವಕುಮಾರ್
ಸುಬ್ರಹ್ಮಣ್ಯ: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಚರ್ಚೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಇನ್ನೊಮ್ಮೆ ಮಾತನಾಡೋಣ ಎಂದು ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ, ಮೂರು ಡಿಸಿಎಂ ಹುದ್ದೆ ಬೇಡಿಕೆ ಚರ್ಚೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು ಇಷ್ಟನ್ನು ಬರೆಯಿರಿ. ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ ಎಂದು ನಗುತ್ತಾ ಉತ್ತರಿಸಿದರು.
ನಾನು ನನ್ನ ಕುಟುಂಬ ಸಮೇತ ಕುಕ್ಕೆಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಎಲ್ಲರ ಶಾಂತಿ ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಮಳೆ ಕಡಿಮೆ ಆಗಿದ್ದು ನೀರಿನ ಸಮಸ್ಯೆ ಆಗಿದೆ. ಮಳೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿದರು.
ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಅಸ್ಪತ್ರೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಚರ್ಚಿಸುತ್ತೇವೆ, ಬೇಡಿಕೆ ಈಡೇರಿಸಲು ಪರಿಶೀಲಿಸುತ್ತೇವೆ ಎಂದರು. ಬಿಜೆಪಿಯ ಪ್ರೀತಂ ಗೌಡ ಮೇಲೆ ವಿಡಿಯೋ ವೈರಲ್ ಸಂಬಂಧ ಪ್ರಕರಣ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದರು. ತದನಂತರ ಉಪಮುಖ್ಯಮಂತ್ರಿಗಳು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಗೌರವಾರ್ಪಣೆ ಸ್ವೀಕರಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿಗಳನ್ನು ಸುಳ್ಯ ಶಾಸಕಿ ಭಾಗಿರತಿ ಮುರುಳಿಯ ಹಾರ ಹಾಕಿ ಸ್ವಾಗತಿಸಿದರು.