Udupi: ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ
ಉಡುಪಿ: ನಮ್ಮ ಮನೆ ನಮ್ಮ ಮರ ತಂಡ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು, ಎಂಐಟಿಯ ಎನ್.ಎಸ್.ಎಸ್ ವಿಭಾಗ ವತಿಯಿಂದ ಪ್ರಗತಿನಗರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉರಗ ತಜ್ಞ ಗುರುರಾಜ್ ಸನಿಲ್, ನಮ್ಮ ಹಿರಿಯರು ಪ್ರಕೃತಿಗೆ ಅಪಾರ ಕೊಡುಗೆ ನೀಡಿದ್ದರು. ನಾಗಬನಗಳ ಮೂಲಕ ಪರಿಸರ ಉಳಿಸುವ ಕಾರ್ಯ ನಿರಂತರ ಮಾಡಿದ್ದರು. ಆದರೆ, ಇಂದು ವಿವಿಧ ಕಾರಣಗಳನ್ನು ನೀಡಿ ಪರಿಸರ ನಾಶ ಮಾಡುತ್ತಿರುವುದು ದುರದೃಷ್ಟ. ನಾವೆಲ್ಲರೂ ಹೆಚ್ಚಿನ ಸಂಖ್ಯೆಗಳಲ್ಲಿ ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂ.ಐ.ಟಿ ಮಣಿಪಾಲ ನಿರ್ದೇಶಕ ಕಾಂ. ಅನಿಲ್ ರಾಣಾ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಎಂ.ಐ.ಟಿ ಮಣಿಪಾಲ ಜಂಟಿ ನಿರ್ದೇಶಕ ಡಾ. ಸೋಮಶೇಖರ್ ಭಟ್, ಭದ್ರತಾಧಿಕಾರಿ ರತ್ನಾಕರ ಸಾಮಂತ್, ಪ್ರಬಂಧಕ ರಾಮದಾಸ್, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಬಾಲಕೃಷ್ಣ ಮದ್ದೋಡಿ, ನಮ್ಮ ಮನೆ ನಮ್ಮ ಮರ ತಂಡದ ಅವಿನಾಶ್ ಕಾಮತ್, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ‍್ದನ ಕೊಡವೂರು, ಕಲಾವಿದೆ ಪದ್ಮಾಸಿನಿ ಉದ್ಯಾವರ ಮೊದಲಾದವರಿದ್ದರು.
ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.