
Ujire: ಎಸ್.ಡಿ.ಎಂ.ಎಜುಕೇಶನಲ್ ಟ್ರಸ್ಟ್‌ನಿಂದ ವಾರ್ಷಿಕ 1.35 ಕೋಟಿ ರೂ. ನೆರವು-ಎಸ್.ಡಿ.ಎಂ.ನ ಪ್ರಸಕ್ತ ವರ್ಷದ ವಿದ್ಯಾರ್ಥಿ ವೇತನ ಯೋಜನೆಗೆ ಚಾಲನೆ
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್‌ನ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ನಿರತರಾಗಿರುವ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿರುವ 1.35 ಕೋಟಿ ರೂ.ಗಳ ವಿದ್ಯಾರ್ಥಿ ವೇತನ ವಿತರಣೆ ಪ್ರಕ್ರಿಯೆಗೆ ಎಸ್.ಡಿ.ಎಂ. ಶಿಕ್ಷಣಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಚಾಲನೆ ನೀಡಿದರು.
ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ಶೈಕ್ಷಣಿಕ ಬದುಕಿನ ಸುಗಮ ನಿರ್ವಹಣೆಗಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶ ವಿದ್ಯಾರ್ಥಿ ವೇತನದ ಪರಿಕಲ್ಪನೆಯ ಹಿಂದಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಮಯದಲ್ಲಿ ನಕಾರಾತ್ಮಕ ಹವ್ಯಾಸಗಳಿಗೆ ಆಕರ್ಷಿತರಾಗದೆ ಅಧ್ಯಯನಕ್ಕೆ ಹೆಚ್ಚುಆದ್ಯತೆ ನೀಡಬೇಕು. ಸಂಸ್ಥೆಯು ನೀಡುವ ಈ ವಿದ್ಯಾರ್ಥಿ ವೇತನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಈ ಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಅವರು ವಿದ್ಯಾರ್ಥಿ ವೇತನದ ಪ್ರಕ್ರಿಯೆಯನ್ನು ಇಂದಿಗೂ ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಗಳಾಗಿದ್ದ ಡಾ. ಬಿ. ಯಶೋವರ್ಮ ಅವರೂ ಕೂಡಾ ವಿದ್ಯಾರ್ಥಿ ವೇತನ ಅನುಷ್ಠಾನಕ್ಕೆ ವಿಶೇಷ ಕಾಳಜಿ ವಹಿಸಿದ್ದರು ಎಂದು ಸ್ಮರಿಸಿದರು.
ಶಿಕ್ಷಣ ಸಂಸ್ಥೆಗಳ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ.ಉಪಸ್ಥಿತರಿದ್ದರು. ಎಸ್.ಡಿ.ಎಂ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಂದಿಸಿ, ಸಹ ಪ್ರಾಧ್ಯಾಪಕರಾದ ಮಧು ಕೆ. ನಿರೂಪಿಸಿದರು.