
Ujire: ಹೊಸತನಕ್ಕೆ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕು: ಡಾ. ಸತೀಶ್‌ಚಂದ್ರ ಎಸ್.
ಉಜಿರೆ: ಕಾಲ-ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಸಹಜ, ಆ ಬದಲಾವಣೆಗೆ ನಾವು ಹೊಂದಿಕೊಳ್ಳದಿದ್ದರೆ ನಮಗೇ ನಷ್ಟವಾಗುತ್ತದೆ ಆದ್ದರಿಂದ ಹೊಸ ತನಕ್ಕೆ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್‌ಚಂದ್ರ ಎಸ್. ಹೇಳಿದರು.
ಅವರು ಜೂ.24 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿ ಉಜಿರೆಯ ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಸನಿವಾಸ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಿಗಾಗಿ ಆಯೋಜಿಸಿರುವ ‘ಫೆಕಲ್ಟಿ ಡೆವಲಪ್ಮೆಂಟ್ ಕಾರ್ಯಾಗಾರ’ವನ್ನು ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ದೃಕ್-ಶ್ರವಣ ಕೊಠಡಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರುಗಳು ಕಾಲಕ್ಕೆ ತಕ್ಕಂತೆ ಮೌಲ್ಯವರ್ಧನೆಗೊಂಡಾಗ ಮಾತ್ರ ವಿದ್ಯಾರ್ಥಿಗಳನ್ನೂ ಸಹ ಅದೇ ದಿಕ್ಕಿನಲ್ಲಿ ಪ್ರೇರೆಪಿಸಲಾಗುತ್ತದೆ ಹಾಗೂ ವಿದ್ಯಾರ್ಥಿಗಳೂ ಸಹ ನಮ್ಮಿಂದ ಪ್ರೇರಿತರಾಗುತ್ತಾರೆ. ಬಾಹ್ಯ ಸವಾಲುಗಳು ಸಾಕಷ್ಟು ಇದ್ದರೂ ಅದನ್ನು ನಿರ್ವಹಿಸುವ ಕೌಶಲ್ಯ ಹೋಂದುವುದೇ ಈ ಕಾರ್ಯಕ್ರಮದ ಉದ್ದೇಶ. ಶಿಕ್ಷಕ ಮೊದಲು ತನ್ನ ವೃತ್ತಿಯನ್ನು, ವಿಷಯವನ್ನು ಹಾಗೂ ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಸಹಜವಾಗಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಎರ್ಪಡುತ್ತದೆ ಇದು ಇಬ್ಬರ ಉತ್ತಮ ಬೆಳವಣಿಗೆ ಒಟ್ಟಿಗೆ ಸಂಸ್ಥೆಯ ಬೆಳವಣಿಗೆಗೂ ಸಹಾಯವಾಗುತ್ತದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಸೇಂಟ್ ಅಲೋಸಿಯಸ್ ಕಾಲೇಜು, ಮಂಗಳೂರಿನ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ಜಾನ್ ಶೇರಾ ಭಾಗವಹಿಸಿ ಮಾತನಾಡಿ, ಉತ್ತಮ ಶಿಕ್ಷಕರಾಗಲು ತಮ್ಮ ತಮ್ಮ ವಿಷಯಗಳಲ್ಲಿ ಅತೀ ಆಳವಾದ ಪಾಂಡಿತ್ಯ ಅಗತ್ಯ ಅಂತಹ ಕೌಶಲ್ಯ ನಿರಂತರ ಅಧ್ಯಯನದಿಂದ ಸಾಧ್ಯವಾಗುತ್ತದೆ. ಇಂತಹ ಕಾರ್ಯಾಗಾರಗಳು ನಮ್ಮನ್ನು ನಾವು ಅರಿತುಕೊಳ್ಳಲು ಅತೀ ಮುಖ್ಯ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮೊದಲ ದಿನ ಗಣಿತ ವಿಷಯದ ಕುರಿತು ವಿಶೇಷ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಸೇಂಟ್ ಅಲೋಸಿಯಸ್ ಕಾಲೇಜು, ಮಂಗಳೂರಿನ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ಜಾನ್ ಶೇರಾ ಹಾಗೂ ಪ್ರೊ. ಪ್ರಕಾಶ್ ಪ್ರಭು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯುತ್ತ ಕಾಲೇಜಿನ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರದ ಪ್ರತೀ ವಿಷಯಗಳಿಗೆ ಎರಡೆರಡು ದಿನಗಳಂತೆ ಜು.2 ರ ತನಕ ನುರಿತ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಯಲಿದೆ.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ., ಸಂಪನ್ಮೂಲ ವ್ಯಕ್ತಿ ಪ್ರೊ. ಪ್ರಕಾಶ್ ಪ್ರಭು, ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ., ಎಸ್.ಡಿ.ಎಂ. ಸನಿವಾಸ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸುನೀಲ್ ಪಂಡಿತ್ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ನಿಹಾರಿಕ ಜಿ.ಎನ್. ಕಾರ್ಯಕ್ರಮ ನಿರ್ವಹಿಸಿದರು. ಎಸ್.ಡಿ.ಎಂ. ಸನಿವಾಸ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸುನೀಲ್ ಪಂಡಿತ್ ಸ್ವಾಗತಿಸಿ, ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಭೌತ ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ.ಹೆಚ್. ವಂದಿಸಿದರು.