
Ullal: ಬೋಳಿಯಾರ್ ಘಟನೆ ನೆಪದಲ್ಲಿ ನಿರಂತರ ಮುಸ್ಲಿಂ ಬೇಟೆ-ದೌರ್ಜನ್ಯ ಖಂಡಿಸಿ ನಾಳೆ ಎಸ್‌ಡಿಪಿಐನಿಂದ ಪ್ರತಿಭಟನೆ
ಉಳ್ಳಾಲ: ಬೋಳಿಯಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಇರಿತ ಪ್ರಕರಣದಲ್ಲಿ ಈಗಾಗಲೇ ಹದಿನಾರು ಮಂದಿ ಆರೋಪಿಗಳ ಬಂಧನವಾಗಿದ್ದರೂ ಮುಸ್ಲಿಂ ಬೇಟೆ ಮುಂದುವರಿಸಿರುವ ಪೊಲೀಸರು ಮಧ್ಯರಾತ್ರಿ ವೇಳೆ ಬೋಳಿಯಾರು ಪ್ರದೇಶದ ಮುಸ್ಲಿಮರ ಮನೆಗೆ ನುಗ್ಗಿ ಅಮಾಯಕರನ್ನು ಬಂಧಿಸುತ್ತಿದ್ದು, ಇದನ್ನ ಪ್ರಶ್ನಿಸಬೇಕಾದ ಮುಸ್ಲಿಂ ಸಮುದಾಯದ ಶಾಸಕ ಯು.ಟಿ. ಖಾದರ್ ಅವರು ವಿದೇಶದಲ್ಲಿ ಕುಳಿತಿದ್ದಾರೆ. ಮುಸ್ಲಿಮರ ವಿರುದ್ಧ ಪೊಲೀಸ್ ಬೇಟೆಯನ್ನು ಖಂಡಿಸಿ ಸಮುದಾಯದವರು ಒಟ್ಟು ಸೇರಿ ಜೂನ್ 25 ರಂದು ಸಂಜೆ 4 ಗಂಟೆಗೆ ಕೊಣಾಜೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೋಳಿಯಾರಿನಲ್ಲಿ ಚೂರಿ ಇರಿತ ಪ್ರಕರಣ ನಡೆದಿದೆ. ಈ ಬಗ್ಗೆ ಮ ಮೇಸೀದಿ ಕಮಿಟಿಯವರು ಮೊದಲಿಗೆ ಪೊಲೀಸರಿಗೆ ದೂರು ನೀಡಿದ್ದರು. ಮಂಗಳೂರು ಪೊಲೀಸ್ ಆಯುಕ್ತರು ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ವಿಜಯೋತ್ಸವ ಸಂದರ್ಭ ಬಿಜೆಪಿಗರು ಮಸೀದಿ ಮುಂಭಾಗದಲ್ಲಿ ಜೈ ಶ್ರೀರಾಮ್, ಪಾಕಿಸ್ತಾನದ ಬಗೆಗಿನ ಘೋಷಣೆ ಹಾಕಿದ್ದೇ ಗಲಾಟೆಗೆ ಕಾರಣ ಎಂದಿದ್ದಾರೆ.
ಘಟನೆ ನಡೆದು ಹತ್ತು ಹದಿನೈದು ದಿನಗಳಾಗಿವೆ. ಇರಿತಕ್ಕೆ ಸಂಬಂಧಿಸಿ ಹದಿನಾರು ಆರೋಪಿಗಳನ್ನು ಬಂಧಿಸಿದ್ದರೂ ಬೋಳಿಯಾರುವಿನಲ್ಲಿ ಮುಸ್ಲಿಂ ಯುವಕರ ಮನೆಗೆ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅಮಾಯಕ ಯುವಕರನ್ನು ವಿಚಾರಣೆ ನೆಪದಲ್ಲಿ ಎರಡು ರಾತ್ರಿ, ಎರಡು ಹಗಲು ಅಕ್ರಮವಾಗಿ ಠಾಣೆಯಲ್ಲಿ ಕೂರಿಸಿದ್ದಾರೆ. ಸಿಸಿ ಕ್ಯಾಮೆರಾ ಫೂಟೇಜ್ ಆಧಾರದಲ್ಲಿ ಅದರಲ್ಲಿ ಕಾಣುವವರ ಸಂಬಂಧಿಕರನ್ನು ಠಾಣೆಗೆ ಕರೆದು ಕೂರಿಸಿದ್ದು ಯಾವ ಕಾನೂನು? ಎಂದು ಪ್ರಶ್ನಿಸಿದ ಅವರು, ಅದೇ ಸಿಸಿ ಕ್ಯಾಮೆರದಲ್ಲಿ ಗಲಭೆಗೆ ಪ್ರಚೋದಿಸಿದ ಸಂಘ ಪರಿವಾರದವರ ಕೃತ್ಯ ಕಾಣಸಿಕ್ಕಿಲ್ಲವೆ ಅವರ ಬಂಧನ ಯಾಕಿಲ್ಲ.ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಇದೆಯೇ..? ಅಥವಾ ಹಿಂದಿನ ಬೊಮ್ಮಾಯಿ ಸರಕಾರನೆ ಮುಂದುವರೆದಿದೆಯೇ ಎಂದು ಸವಾಲು ಹಾಕಿದರು.
ರಶೀದ್ ಎಂಬವರನ್ನು ಭಾನುವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮಹಿಳೆಯರಿರುವ ಮನೆಗಳ ಬಾಗಿಲುಗಳನ್ನು ಮಧ್ಯರಾತ್ರಿ ಬಡಿದು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಪೊಲೀಸರು ಸರಕಾರ ಮತ್ತು ಸಂಘ ಪರಿವಾರವನ್ನು ಸಂತೃಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ರಾತ್ರಿ ಹಗಲು ದುಡಿದವರು ಜೈಲಿನಲ್ಲಿದ್ದಾರೆ. ಶಾಸಕ ಖಾದರ್ ಅವರೇ ನೀವು ಬ್ಯಾಲೆನ್ಸಿಂಗ್ ರಾಜಕೀಯ ನಿಲ್ಲಿಸಿ. ಸಂಘ ಪರಿವಾರದ ರಕ್ಷಿಸಲು ವಿದಾನ ಸೌಧ, ಕೇಶವ ಕೃಪದಿಂದ ಸರಕಾರಕ್ಕೆ ಆದೇಶ ಬರುತ್ತಿದೆಯೇ ಎಂದು ಅನ್ವರ್ ಸಾದತ್ ಪ್ರಶ್ನಿಸಿದರು.
ಜೂ.9 ರಂದು ಬೋಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ಸಂದರ್ಭ ಬೋಳಿಯಾರು ಮಸೀದಿ ಮುಂದೆ ಬಂದು ಸಂಘಪರಿವಾರದ ಕಾರ್ಯಕರ್ತರು ಸಮುದಾಯವನ್ನು ಪ್ರಚೋದಿಸುವ ರೀತಿಯಲ್ಲಿ ಘೋಷಣೆಗಳನ್ನು ಕೂಗಿ, ಡಿ.ಜೆ ಡ್ಯಾನ್ಸ್ ನಡಿಸಿದ್ದಾರೆ. ಬಿಜೆಪಿ- ಸಂಘಪರಿವಾರ ಒಂದು ಸಮಯದಾಯವನ್ನು ಕೆಣಕಿಸುವ ರೀತಿಯಲ್ಲಿ ಕೋಮುಗಲಭೆಗೆ ಹುನ್ನಾರ ನಡೆಸಿಯೇ ವಿಜಯೋತ್ಸವ ನಡೆಸಿದೆ. ಆದರೆ ಪ್ರಚೋದಿಸಿದವರ ಮೇಲೆ 153(A) ಕಲಂ ನಡಿ ಪ್ರಕರಣ ದಾಖಲಿಸಿದ್ದರೂ, ಪೊಲೀಸರು ಯಾರನ್ನೂ ಬಂಧಿಸದೆ ಕೇವಲ ಬೋಳಿಯಾರಿನಲ್ಲಿರುವ ಮುಸ್ಲಿಂ ಮನೆಗಳಿಗೆ ಮನೆಗಳಿಗೆ ದಾಳಿ ನಡೆಸಿ ಈವರೆಗೆ 15 ಮಂದಿಯನ್ನು ಬಂಧಿಸಲಾಗಿದೆ.
ಮುಸ್ಲಿಂ ಶಾಸಕನಿರುವ ಕ್ಷೇತ್ರದಲ್ಲಿ ಪೊಲೀಸರು ಉತ್ತರ ಪ್ರದೇಶ, ಬಿಹಾರ ಮಾದರಿಯಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಲಾಗುತ್ತಿದೆ. ಅಲ್ಲಿ ಯುವಕರು ಸಿಗದೇ ಇದ್ದಲ್ಲಿ ವೃದ್ದೆ ತಾಯಿ, ಮಕ್ಕಳು, ರೋಗಿ ಮಹಿಳೆಯರನ್ನೂ ಠಾಣೆಗೆ ತಂದು ಎರಡು ದಿನ ಎರಡು ರಾತ್ರಿ ಕುಳಿತುಕೊಳ್ಳುವಂತೆ ಇಲಾಖೆ ಮಾಡಿದೆ. ಪೊಲೀಸರು ಯಾರನ್ನಾದರೂ ವಶಕ್ಕೆ ಪಡೆದುಕೊಂಡರೆ 24 ಗಂಟೆಯೊಳಗೆ ಮನೆಗೆ ಮಾಹಿತಿ ಅಥವಾ ಬಿಡುಗಡೆ ಮಾಡಬೇಕಿದೆ. ಅದನ್ನು ಮಾಡದೇ ಜಿಲ್ಲೆಯಿಡೀ ಪೊಲೀಸ್ ರಾಜ್‌ನಂತೆ ವರ್ತಿಸುತ್ತಿದೆ. ಶೇ.85 ಮುಸಲ್ಮಾನರ ಮತದಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಸಿದ್ಧರಾಮಯ್ಯ ಸರಕಾರ ಹಳೆಯ ಬೊಮ್ಮಾಯಿ ಸರಕಾರದಂತೆ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ, ಕಾಂಗ್ರೆಸಿಗರಿಗೆ ಜೈಕಾರ ಹಾಕಲು ಮಾತ್ರ ಮಸಲ್ಮಾನರು ಬೇಕು. ಈಗ ಮುಸಲ್ಮಾನರನ್ನ ಪೊಲೀಸರ ಮೂಲಕ ಜೈಲಿಗೆ ಕಳಿಸುತ್ತಿದ್ದಾರೆ. ನಾವು ಇದುವರೆಗೂ ಸಂಯಮದಲ್ಲಿದ್ದೇವೆ. ಬಕ್ರೀದ್ ಹಬ್ಬದ ಪ್ರಯುಕ್ತ ಮಂಗಳೂರು ಪೊಲೀಸ್ ಕಮೀಷನರ್ ಶಾಂತಿ ಸಭೆ ನಡೆಸುತ್ತಾರೆ. ಬಕ್ರೀದ್ ಹಬ್ಬದ ಮರುದಿವಸವೇ ಬಿಜೆಪಿ ವಿಜಯೋತ್ಸವಕ್ಕೆ ಅನುಮತಿ ನೀಡಿದ್ದಾರೆ ಇದೆಂತಹ ತಾರತಮ್ಯ ನೀತಿ. ಬೋಳಿಯಾರು ಇರಿತ ಪ್ರಕರಣದಲ್ಲಿ ಹದಿನಾರು ಮಂದಿ ಬಂಧನದ ಬಳಿಕವೂ ಪೊಲೀಸ್ ಇಲಾಖೆಗೆ ಇನ್ನೂ ಹೆಚ್ಚಿನ ಆಸಕ್ತಿಯೇಕೆ? ಪೊಲೀಸರ ಕೋಲಾರ್ ಪಟ್ಟಿ ಹಿಡಿಯುತ್ತೇನೆಂದ ಶಾಸಕ ಹರೀಶ್ ಪೂಂಜಾ ರನ್ನು ಬಂಧಿಸಲು ನಿಮಗೆ ತಾಕತ್ತಿಲ್ಲವೆ. ಜಿಲ್ಲೆಯು ಸಂಘ ಪರಿವಾರದ ಪ್ರಯೋಗ ಶಾಲೆಯಾಗುವುದಾದರೆ ಅಲ್ಪ ಸಂಖ್ಯಾತರೂ ಪಕ್ಷಾತೀತವಾಗಿ ಒಟ್ಟಾಗಿ ಹೋರಾಡಲಿದ್ದೇವೆಂದು ಎಚ್ಚರಿಸಿದರು.
ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಸಿರಾಜ್ ಪತ್ನಿ ಖೈರುನ್ನೀಸ ಮಾತನಾಡಿ, ನನ್ನ ಪತಿಯನ್ನು ವಿಚಾರಣೆಗೆಂದು ಮಧ್ಯರಾತ್ರಿ ಕರಕೊಂಡು ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆಯೇ ಮಧ್ಯರಾತ್ರಿ ಮನೆಗೆ ನುಗ್ಗಿ ಪೊಲೀಸರು ಕ್ರೌರ್ಯ ತೋರಿಸುತ್ತಿದ್ದಾರೆ ಎಂದು ಅಳವತ್ತು ತೋಡಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಎಸ್‌ಡಿಪಿಐ ಕ್ಷೇತ್ರಾಧ್ಯಕ್ಷ ಬಶೀರ್ ಎಸ್.ಎಂ., ರಾಜ್ಯ ಸಮಿತಿ ಸದಸ್ಯ ನವಾಜ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಫಳ್ನೀರ್ ಉಪಸ್ಥಿತರಿದ್ದರು.